ಜಿಲ್ಲಾ ಸುದ್ದಿ

ಕೋಳಿ ಕೂಗೋದು ಕೇಡುಗಾಲಕ್ಕಂತೆ!

ಕೋಳಿ ಕೂಗೋದು ಕೇಡುಗಾಲಕ್ಕಂತೆ!
Published On :

ಅನಾಹುತ ಆಗುತ್ತದೆಂದು ಕೋಳಿಯನ್ನೇ ಸಾಕಿಲ್ಲ

ಗದಗ:
ಕೋಳಿ ಕೂಗದ ಊರಿದೆಯೇ? ಇಲ್ಲಿ ಮಾತ್ರ ಕೋಳಿ ಕೂಗಿದರೆ ಅದು ಕೇಡುಗಾಲಕ್ಕೆ ಮಾತ್ರ! ಹೀಗಾಗಿ, ಗದಗ ಸಮೀಪದ ಪಾಪನಾಶಿ ತಾಂಡದಲ್ಲಿ ಕೋಳಿ ಕೂಗುವುದಿಲ್ಲ. ಹಾಗೆಂದು ಹಾಡುತ್ತದೆಯೇ ಎಂದೂ ಕೇಳಬೇಡಿ. ಏಕೆಂದರೆ ಇಲ್ಲಿ ಕೋಳಿಗಳೇ ಇಲ್ಲ. ಕೋಳಿ ಕೂಗಿದರೆ ಅಪಶಕುನ ಎಂಬ ನಂಬಿಕೆ ಈ ಊರಿನ ಜನರದ್ದು. ಆದ್ದರಿಂದ ಈ ಊರಲ್ಲಿ ಕೋಳಿ ಕೂಗದೇ ಬೆಳಗಾಗುತ್ತದೆ.

ಪುಟ್ಟ ತಾಂಡಾ: ಗದಗ ಹತ್ತಿರದಲ್ಲಿಯೇ ಇರುವ ಪಾಪನಾಶಿ ತಾಂಡದಲ್ಲಿ 160ಕ್ಕೂ ಅಧಿಕ ಮನೆಗಳಿದ್ದು, ಎರಡು ಸಾವಿರದಷ್ಟು ಜನಸಂಖ್ಯೆ ಇದೆ. ಇಲ್ಲಿ ವಾಸಿಸುವವರು ಬಹುತೇಕ ಲಂಬಾಣಿ ಸಮುದಾಯದವರು. ಹಾಗಾಗಿ ಪ್ರತಿಯೊಬ್ಬರೂ ಹಿರಿಯರು ನಡೆದುಕೊಂಡು ಬಂದ ಹಾದಿಯಲ್ಲಿಯೇ ಸಾಗುತ್ತಿದ್ದಾರೆ.

ಶತಮಾನದಿಂದ ಸಾಕಿಲ್ಲ: ನೂರಾರು ವರ್ಷದ ಹಿಂದೆ ಗ್ರಾಮದ ತಿರುಪತಿ ದೇವಸ್ಥಾನದ ಪೂಜಾರಿಗಳು ಗ್ರಾಮದಲ್ಲಿ ವಾಡಿಕೆ(ಹೇಳಿಕೆ) ನುಡಿದಿದ್ದಾರಂತೆ. ಈ ಗ್ರಾಮದಲ್ಲಿ ಕೋಳಿ ಸಾಕಿದ್ರೆ, ಸಾರಾಯಿ ತಯಾರು ಮಾಡಿ ಮಾರಿದರೆ ಊರಿಗೆ ಕೆಡಕಾಗುತ್ತೆ ಎಂದು ತಿಳಿಸಿದ್ದರಂತೆ. ಅಲ್ಲಿಂದೀಚೆಗೆ ಈ ಗ್ರಾಮದಲ್ಲಿ ಕೋಳಿ ಸದ್ದು ಇಲ್ಲ. ಯಾರೂ ಇಲ್ಲಿ ಕೋಳಿ ಸಾಕೋಲ್ಲ, ಸಾರಾಯಿಯನ್ನೂ ಮಾರಲ್ಲ.

ಜನರು ಇಂದು ಹೊಸ ತಲೆ ಮಾರಿನತ್ತ ಸಾಗುತ್ತಿದ್ದಾರೆ. ಕೋಳಿ ಸಾಕಾಣಿಕೆ ರೈತರು ಹಾಗೂ ಕೂಲಿಕಾರರ ಕುಟುಂಬದ ಸಹ ಉತ್ಪನ್ನವಾಗಿದೆ. ಆದರೆ, ಈ ತಾಂಡಾದಲ್ಲಿ ಎಲ್ಲರೂ ದುಡಿದು ತಿನ್ನುವವರೇ ಇದ್ದರೂ ಕೋಳಿ ಮಾತ್ರ ಸಾಕುವುದಿಲ್ಲ. ಸಾರಾಯಿ ತಯಾರಿಸುವ ಅಥವಾ ಎಲ್ಲಿಂದಲೋ ತಂದು ಮಾರಾಟ ಮಾಡುವ ಸಾಹಸಕ್ಕೂ ಕೈ ಹಾಕಿಲ್ಲ. ಒಂದು ವೇಳೆ ಕೋಳಿ ಸಾಕಿದರೆ, ಸಾರಾಯಿ ಮಾರಿದರೆ ಕುಟುಂಬವೇ ಸರ್ವನಾಶವಾಗುತ್ತದೆ ಎಂಬ ನಂಬಿಕೆ ಇಲ್ಲಿನ ನಿವಾಸಿಗಳದ್ದು.

ಒಳ್ಳೆಯದಾಗಿದೆ: ಯುವಕರು ಸಾರಾಯಿ ಮತ್ತಿತರ ದುಶ್ಚಟಗಳಿಂದ ದೂರವಿರಲು ಇದು ಪರೋಕ್ಷವಾಗಿ ಸಹಕಾರಿಯಾಗಿದೆ. ಒಟ್ಟಿನಲ್ಲಿ ನಂಬಿಕೆಯ ಹೆಸರಿನಲ್ಲಿ ನಡೆಯುತ್ತಿರುವ ಈ ವಿಶೇಷ ಆಚರಣೆ ಪಾಪನಾಶಿ ತಾಂಡವನ್ನು ಎಲ್ಲ ಗ್ರಾಮಗಳು, ತಾಂಡಾಗಳಿಗಿಂತ ವಿಭಿನ್ನವಾಗಿಸಿದೆ. ಗ್ರಾಮಸ್ಥರೆಲ್ಲರೂ ನೆಮ್ಮದಿಯಿಂದ ಜೀವನ ಮಾಡುವ ವಾತಾವರಣ ಸೃಷ್ಟಿಸಿದೆ ಎಂಬುದು ಸುತ್ತಮುತ್ತಲ ಗ್ರಾಮಗಳ ಜನರ ಅಭಿಮತವಾಗಿದೆ.

-ಶಿವಕುಮಾರ್ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.