ಏಷ್ಯಾದ ಮೊದಲ ರೈಸ್ ಪಾರ್ಕ್ಗೆ ಚಾಲನೆ

ಕೊಪ್ಪಳ: ಏಷ್ಯಾ ಖಂಡದಲ್ಲಿಯೇ ಮೊದಲ ರೈಸ್ ಪಾರ್ಕ್ ನಿರ್ಮಾಣ ಕಾಮಗಾರಿಗೆ ಗಂಗಾವತಿ ತಾಲ್ಲೂಕಿನ ನವಲಿ ಗ್ರಾಮದ ಬಳಿ ಸಿಎಂ ಸಿದ್ದರಾಮಯ್ಯ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದರು.
ಆ ಮೂಲಕ ರಾಜ್ಯದ ತುಮಕೂರಿನಲ್ಲಿ ಫುಡ್ಪಾರ್ಕ್ ಆಗಿರುವ ಬೆನ್ನಲ್ಲೇ ರೈಸ್ ಪಾರ್ಕ್ ನಿರ್ಮಾಣಕ್ಕೆ ಚಾಲನೆ ದೊರೆತಂತಾಗಿದೆ. ಸುಮಾರು 37 ಕೋಟಿ ರು. ಪ್ರಾರಂಭಿಕ ವೆಚ್ಚದ ಈ ಯೋಜನೆ ಪಿಪಿಪಿ ಯೋಜನೆಯಡಿ ಸಾವಿರಾರು ಕೋಟಿ ರುಪಾಯಿ ವಿನಿಯೋಗಕ್ಕೆ ನಾಂದಿಯಾಗಲಿದೆ. ಅಲ್ಲದೆ ರಾಜ್ಯದಲ್ಲಿ ಅಕ್ಕಿ ಉತ್ಪನ್ನಗಳಲ್ಲಿ ಹೊಸ ಆಯಾಮ ನೀಡಿ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಸೇರಿದಂತೆ ರಾಜ್ಯದ ಬತ್ತಕ್ಕೆ ವಿಶ್ವ ಮಾರುಕಟ್ಟೆ ಒದಗಿಸಲಿದೆ.
ಸುಮಾರು 438 ಎಕರೆ ವಿಶಾಲ ಪ್ರದೇಶದಲ್ಲಿ ಈ ಮಾರುಕಟ್ಟೆ ಮೈದಳೆಯುವ ಜೊತೆಗೆ ದೇಶದಲ್ಲಿಯೇ ಅಕ್ಕಿಯ ಸುಮಾರು 23 ಉಪ ಉತ್ಪನ್ನಗಳನ್ನು ಉತ್ಪಾದನೆ ಮಾಡಲಿದೆ. ಬತ್ತದ ತೌಡಿನಿಂದ ವಿದ್ಯುತ್ ಉತ್ಪಾದನೆ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ ಎಂದು ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಂಬಲ ಬೆಲೆ: ರಾಜ್ಯದಲ್ಲಿ ಈ ಬಾರಿ ಈರುಳ್ಳಿ ಮತ್ತು ಮೆಕ್ಕೆ ಜೋಳ ಅಪಾರ ಪ್ರಮಾಣದಲ್ಲಿ ಉತ್ಪಾದನೆಯಾಗಿದೆ. ಆದರೆ ಮಾರುಕಟ್ಟೆಯಲ್ಲಿ ದರ ಕುಸಿತವಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರನ್ನು ಈ ದರ ಕುಸಿತದಿಂದ ಪಾರು ಮಾಡಲು ಬೆಂಬಲ ಬೆಲೆ ಕೇಂದ್ರಗಳನ್ನು ಶೀಘ್ರದಲ್ಲಿಯೇ ತೆರೆಯಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈರುಳ್ಳಿ ಹಾಗೂ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವಂತೆ ಈಗಾಗಲೇ ಸಂಪುಟ ಉಪ ಸಮಿತಿಗೆ ಸೂಚನೆ ನೀಡಲಾಗಿದ್ದು, ಶೀಘ್ರದಲ್ಲಿಯೇ ದರ ನಿಗದಿ ಮಾಡಿ ಕ್ರಮಕೈಗೊಳ್ಳಲಿದ್ದಾರೆ.
ಪಂಪ್ಸೆಟ್ಗೆ ಮೀಟರ್ ಹಾಕಿದ್ರೆ 24 ತಾಸು ವಿದ್ಯುತ್
ಕೊಪ್ಪಳ: ಪಂಪ್ಸೆಟ್ಗೆ ಮೀಟರ್ ಅಳವಡಿಸಿಕೊಂಡರೆ ಸರ್ಕಾರದಿಂದ ಕನಿಷ್ಟ ದರದಲ್ಲಿ 24 ತಾಸು ವಿದ್ಯುತ್ ಪೂರೈಕೆಗೆ ಪ್ರತ್ಯೇಕ ಲೈನ್ ಪರಿವರ್ತಕ ಅಳವಡಿಸುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಗಂಗಾವತಿ ತಾಲೂಕಿನ ಕನಕಗಿರಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಸಮ್ಮುಖದಲ್ಲೇ ಡಿ.ಕೆ.ಶಿವಕುಮಾರ್ ಇದನ್ನು ಘೋಷಿಸಿದ್ದಾರೆ. ಈ ಯೋಜನೆಯಲ್ಲಿ ಸರ್ಕಾರವೇ ಪ್ರತಿ ಯೂನಿಟ್ಗೆ ರು.4.50 ನೀಡುತ್ತದೆ. ರೈತರು ರು.1.50 ಭರಿಸಿದರೆ ಈ ಯೋಜನೆ ಜಾರಿ ಮಾಡಬಹುದು.
ಇದರಿಂದ ವಿದ್ಯುತ್ ಸಮಸ್ಯೆಗೆ ರಾಜ್ಯದಲ್ಲಿ ಪರಿಹಾರ ದೊರಕಿದಂತೆ. ರಾಜ್ಯದಲ್ಲೀಗ ರೈತರಿಗೆ ಉಚಿತ ವಿದ್ಯುತ್ ಪೂರೈಸುತ್ತಿರುವುದರಿಂದ ರು.6-7 ಸಾವಿರ ಕೋಟಿ ಹೊರೆಯಾಗುತ್ತಿದೆ. ಇದು ತಪ್ಪಲ್ಲ, ರಾಜ್ಯ ಸರ್ಕಾರದ ಕರ್ತವ್ಯ. ಈ ಜವಾಬ್ದಾರಿ ಹೊರಲು ಸರ್ಕಾರ ಸಿದ್ಧವಿದ್ದರೂ ಸಮರ್ಪಕವಾಗಿ ವಿದ್ಯುತ್ ನೀಡಲಾಗುತ್ತಿಲ್ಲ. ರೈತರಿಗಾಗಿ ಈ ವಿನೂತನ ಯೋಜನೆ ಜಾರಿಗೊಳಿಸುತ್ತಿದ್ದು, ಅನ್ನದಾತರೆಲ್ಲ ಸಹಕರಿಸುತ್ತಾರೆಂಬ ವಿಶ್ವಾಸವಿದೆ ಎಂದರು.
ನಿಮಗೆಲ್ಲಾ ಅದ್ಯಾಕೆ ನಮ್ಮ ಪಾರ್ಟಿ ವಿಷಯ
ನಿಗಮ, ಮಂಡಳಿಗಳಿಗೆ ನೇಮಕ ಮಾಡುವುದು ನಮ್ಮ ಪಾರ್ಟಿಗೆ ಬಿಟ್ಟಿರುವ ವಿಷಯ. ಅದನ್ಯಾಕೆ ನೀವು ಕೇಳುತ್ತಿರಿ? ನೀವೇನು ನಮ್ಮ ಪಾರ್ಟಿಯ ಕಾರ್ಯಕರ್ತರಾ?
-ಇದು ಸಿದ್ದರಾಮಯ್ಯ ಅವರ ಪ್ರಶ್ನೆ. ಕನಕಗಿರಿಯ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಟಿಯಲ್ಲಿ ಪ್ರಶ್ನೆಯೊಂದಕ್ಕೆ ಸಿಡಿಮಿಡಿಗೊಂಡ ಅವರು, ನಮ್ಮ ಪಾರ್ಟಿ ಕಾರ್ಯಕರ್ತರ ವಿಷಯವಾಗಿರುವುದರಿಂದ ಅದನ್ನು ನಾವು ನೋಡಿಕೊಳ್ಳುತ್ತೇವೆ. ಅದರಲ್ಲಿ ಏನೂ ವಿಶೇಷ ಇಲ್ಲ. ಲೋಕಸಭಾ ಚುನಾವಣೆ ನಂತರ ಮಾಡಬೇಕು ಎಂದುಕೊಂಡಿದ್ದೆವು. ಈಗ ಮಾಡುತ್ತಿದ್ದೇವೆ. ಈ ವಿಷಯದಲ್ಲಿ ಮಾಜಿ ಶಾಸಕರು ನಮಗೂ ಆದ್ಯತೆ ನೀಡುವಂತೆ ಕೋರಿದ್ದಾರೆ. ಎಲ್ಲವನ್ನೂ ಆಂತರಿಕವಾಗಿ ತೀರ್ಮಾನ ಮಾಡಲಾಗುವುದು. ಇದರಲ್ಲಿ ಯಾರೊಂದಿಗೂ ಭಿನ್ನಾಭಿಪ್ರಾಯ ಇಲ್ಲ ಎಂದು ಗರಂ ಆಗಿಯೇ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


