ಸಿಐಡಿ ಮುಂದೆ ಹಾಜರಾದ ರಾಘವೇಶ್ವರ ಶ್ರೀ

ಬೆಂಗಳೂರು: ಗಾಯಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿರುವ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಮಂಗಳವಾರ ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
ಶಿಷ್ಯರು ಹಾಗೂ ಬೆಂಬಲಿಗರೊಂದಿಗೆ ಮಧ್ಯಾಹ್ನ 1.45ಕ್ಕೆ ಸಿಐಡಿ ಕಚೇರಿಗೆ ಆಗಮಿಸಿದ ಶ್ರೀಗಳು, ತನಿಖಾಧಿಕಾರಿಗಳ ಮುಂದೆ ಹಾಜರಾದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಶ್ರೀಗಳು ಉತ್ತರ ನೀಡಿದ್ದಾರೆ.
ವಿಚಾರಣೆ ವೇಳೆ ನ್ಯಾಯಾಲಯದ ಆದೇಶದಂತೆ ಶ್ರೀಗಳ ಪರ ವಕೀಲರು ಸ್ಥಳದಲ್ಲಿ ಹಾಜರಿದ್ದರು. ಬುಧವಾರವೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಅಧಿಕಾರಿಗಳು ಸಂಜೆ 7 ಗಂಟೆಗೆ ಕಳುಹಿಸಿದ್ದಾರೆ.
ವಿಚಾರಣೆ ಬಳಿಕ ಕಚೇರಿ ಹೊರಗೆ ಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳ ಪರ ವಕೀಲ ಶಂಭು ಶರ್ಮಾ, ಗಿರಿನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ಅ.9ರಂದು ನೋಟಿಸ್ ನೀಡಿದ್ದರು.
ಆದರೆ, ನೋಟಿಸ್ ಪ್ರತಿ ಭಾನುವಾರ (ಅ.12) ಸಂಜೆ 7.30ಕ್ಕೆ ಕೆಕ್ಕಾರು ಮಠದಲ್ಲಿ ಶ್ರೀಗಳನ್ನು ತಲುಪಿತ್ತು. ಸೋಮವಾರ (ಅ.13) ಬೆಳಗ್ಗೆ 7.30ಕ್ಕೆ ಶ್ರೀಗಳು, ವಿಚಾರಣೆಗೆ ಹಾಜರಾಗಲು ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದರು. ಕೆಕ್ಕಾಟುರ ಮಠದಿಂದ ನಗರಕ್ಕೆ 500 ಕಿ.ಮೀ ಇರುವುದರಿಂದ ಪ್ರಯಾಣದ ವೇಳೆ ಶ್ರೀಗಳು ದಣಿದಿದ್ದರು. ಸಂಜೆಯಾಗಿದ್ದರಿಂದ ವಿಚಾರಣೆಗೆ ಹಾಜರಾಗಲಾಗಲಿಲ್ಲ.
ಹೀಗಾಗಿ ಮಂಗಳವಾರ ವಿಚಾರಣೆಗೆ ಹಾಜರಾಗಿದ್ದಾರೆ. ಹೈಕೋರ್ಟ್ ಅನುಮತಿ ಹಿನ್ನೆಲೆಯಲ್ಲಿ ಒಬ್ಬ ವಕೀಲರ ಸಮ್ಮುಖದಲ್ಲಿ ಶ್ರೀಗಳನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದರು.
ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಸತ್ಯಾಂಶ ಹೊರಬರಬೇಕೆಂಬುದು ಶ್ರೀಗಳ ಆಶಯ. ಹೀಗಾಗಿ ವಿಚಾರಣೆಯಲ್ಲಿ ಶ್ರೀಗಳು ಸಂಪೂರ್ಣ ಸಹಕರಿಸಿದ್ದಾರೆ ಎಂದು ವಕೀಲ ಶಂಭು ಶರ್ಮಾ ತಿಳಿಸಿದರು.
ರಾಮಕಥಾ ಕಲಾವಿದರಿಗೆ ಬೆದರಿಕೆ ಒಡ್ಡಿದ ಆರೋಪ ಸಂಬಂಧ ಪ್ರೇಮಲತಾ ದಂಪತಿ ವಿರುದ್ಧ ಹೊನ್ನಾವರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದಕ್ಕೆ ಪ್ರತಿಯಾಗಿ ದಂಪತಿ ಪುತ್ರಿ, ಅಂಶುಮತಿ, ಶ್ರೀಗಳ ವಿರುದ್ಧ ಕಿರುಕುಳ ಆರೋಪದ ದೂರು ದಾಖಲಿಸಿದ್ದರು. ಅಲ್ಲದೆ, ದಿವಾಕರ ಶಾಸ್ತ್ರಿ ಸೋದರ ಶ್ಯಾಮಪ್ರಸಾದ್ ಶಾಸ್ತ್ರಿ ಪುತ್ತೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಡೆದಿದೆ. ಈ ಎಲ್ಲ ಪ್ರಕರಣಗಳನ್ನು ಸಿಐಡಿ ಅಧಿಕಾರಿಗಳು ಒಂದೇ ಹಂತದಲ್ಲಿ ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ. ಇದರಿಂದ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ವಕೀಲರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


