ಜಿಲ್ಲಾ ಸುದ್ದಿ

ಹೈಫೈ ರಾಜಕಾರಣಿಯ ಠಾಕುಠೀಕು

ಹೈಫೈ ರಾಜಕಾರಣಿಯ ಠಾಕುಠೀಕು
Published On :

-ರಾಯಣ್ಣ ಆರ್.ಸಿ
ಬೆಳಗಾವಿ:
ವೀರಣ್ಣ ಕೌಜಲಗಿ ಕಾಂಗ್ರೆಸ್‌ನಲ್ಲಿ ಲಿಂಗಾಯುತ ಸಮುದಾಯದ ಪ್ರಬಲ ನಾಯಕರೆಂದೇ ಗುರುತಿಸಿಕೊಂಡಿದ್ದರು. ಅದೇ ಮಾನದಂಡದ ಮೇಲೆಯೇ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯೂ ಒಲಿದು ಬಂದಿತ್ತು. ಅವರು ಸಕ್ರಿಯ ರಾಜಕಾರಣದಲ್ಲಿರುವ ತನಕವೂ  ಲಿಂಗಾಯುತ ಮುಂಖರಾಗಿಯೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.

ಹೈಫೈ ರಾಜಕಾರಣಿ ಎಂದೇ ಜನಜನಿತರಾಗಿದ್ದ ವಿಎಸ್ ಕೌಜಲಗಿ  ಸದಾ ಠಾಕುಠೀಕಾಗಿರುತ್ತಿದ್ದರಲ್ಲದೇ, ಸೇನೆಯಲ್ಲಿಯೂ ಸೇವೆ ಸಲ್ಲಿಸಿದ್ದರಿಂದ ರಾಜಕೀಯದಲ್ಲೂ ಶಿಸ್ತಿನ ಸಿಪಾಯಿಯಾಗಿದ್ದರು. ಸುಮಾರು 40 ವರ್ಷ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿ ಅಧಿಕಾರ ರಾಜಕಾರಣದ ಮುಂಚೂಣಿಯಲ್ಲಿದ್ದ ಕೌಜಲಗಿ ಸಹಕಾರಿ ನೇತಾರರಾಗಿಯೂ ಜನಜನಿತರಾಗಿದ್ದರು. ಘಟಪ್ರಭಾದ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ್ದಾರೆ.

ಕೌಜಲಗಿ ಅವರು ಸಕ್ರಿಯ ರಾಜಕಾರಣದಲ್ಲಿರುವ ತನಕ ಅರಭಾವಿ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಖ್ಯಾತವಾಗಿತ್ತು. ಅವರು ಇದೇ ಕ್ಷೇತ್ರದಿಂದ 6 ಬಾರಿ ರಾಜ್ಯ ವಿಧಾನಸಭೆಗೆ ಆಯ್ಕೆಗೊಂಡಿದ್ದರು. ಮೂರು ಬಾರಿ ಸಚಿವರಾಗಿ ಒಂದು ಬಾರಿ ರಾಜ್ಯವಿಧಾನಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿ ತಮ್ಮ ಸ್ಥಾನವನ್ನು ತ್ಯಜಿಸಬೇಕಾಯಿತು. ಗುತ್ತಿಗೆದಾರರಿಂದ ಹಣ ಪಡೆದಿದ್ದಾರೆ ಎಂಬ ಆರೋಪ ಹೊತ್ತ ಕೌಜಲಗಿ ಅವರನ್ನೊಳಗೊಂಡ ಟೇಪ್ ಭಾರಿ ಸಂಚಲನ ಮೂಡಿಸಿತ್ತು. ಇದು ಅವರ ಪದತ್ಯಾಗಕ್ಕೂ ಕಾರಣವಾಯಿತು.

ಸೋಲನ್ನೂ ಕಂಡಿದ್ದರು
1973ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಆಯ್ಕೆಗೊಂಡಿದ್ದ ಅವರು 2 ಬಾರಿ ಸೋಲನ್ನೂ ಕಂಡಿದ್ದರು. 1985ರಲ್ಲಿ ಅರಭಾವಿ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು. ಅಂದು ಆರ್.ಎಂ.ಪಾಟೀಲ ವಿರುದ್ಧ ಮೊದಲ ಬಾರಿಗೆ ಸೋಲುಕಂಡಿದ್ದ ಅವರು 1989ರಲ್ಲಿ ಜಯ ದಾಖಲಿಸಿದ್ದರು. 2004ರಲ್ಲಿ ಎರಡನೇ ಬಾರಿಗೆ ಪರಾಭವಗೊಂಡಿದ್ದರು. ಅಂದಿನಿಂದ ರಾಜಕೀಯ ಹಿನ್ನಲೆಗೆ ಹೋದ ಕೌಜಲಗಿ ಸಕ್ರಿಯ ರಾಜಕಾರಣದಿಂದ ಮರೆಯಾಗಿದ್ದರು. ಅರಭಾವಿ ಕ್ಷೇತ್ರವೂ ಕಾಂಗ್ರೆಸ್ ಕೈತಪ್ಪಿದ್ದು, ಕ್ಷೇತ್ರ ಈಗಲೂ ಕಾಂಗ್ರೆಸ್‌ಗೆ ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ.

ಬಿ.ಇ(ಸಿವಿಲ್) ಪದವೀದರರಾಗಿದ್ದ ಅವರು ನೌಕಾಪಡೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸಿದ್ದರು. 1965ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ್ದಲ್ಲಿ ಭಾಗವಹಿಸಿದ್ದರಲ್ಲದೇ, 1970ರಲ್ಲಿ ಸೇನೆಯಿಂದ ನಿವೃತ್ತಿ ಹೊಂದಿ, 1972ರಿಂದ ರಾಜಕೀಯ ರಂಗಕ್ಕೆ ಧುಮುಕಿದ್ದರು.

ನೌಕಾಪಡೆಯಿಂದ ವಿಧಾನಸೌಧಕ್ಕೆ
ಗೋಕಾಕ ತಾಲ್ಲೂಕು ಶಿವಾಪೂರದವರಾದ ವಿ.ಎಸ್.ಕೌಜಲಗಿ ಅವರು ತಾಯಿಯ ತವರೂರು ಬೈಲಹೊಂಗಲ ತಾಲ್ಲೂಕಿನ ದೇಸನೂರಿನಲ್ಲಿ 1938ರಲ್ಲಿ ಜನಿಸಿದ್ದರು. ಬಿಇ ಪದವೀದರರಾಗಿದ್ದ ಕೌಜಲಗಿಯವರು 1962ರಲ್ಲಿ ನೌಕಾಪಡೆ ಸೇರಿ ಸಬ್ ಲೆಫ್ಟಿನೆಂಟ್ ಆಗಿ ಸೇವೆಸಲ್ಲಿಸಿದ್ದಾರೆ. 1965ರಲ್ಲಿ ಇಂಡೋ ಪಾಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. 1972ರಿಂದ ರಾಜಕೀಯ ಪ್ರವೇಶಿಸಿದ ವೀರಣ್ಣ ಶಿವಲಿಂಗಪ್ಪ ಕೌಜಲಗಿಯವರು, 1974ರಲ್ಲಿ ದೇವರಾಜು ಅರಸು ಸರ್ಕಾರದಲ್ಲಿ ಸಣ್ಣ ನೀರಾವರಿ ಖಾತೆ ಸಚಿವರಾಗಿ, ಎಸ್.ಎಂ.ಕೃಷ್ಣಾ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕೆಲಸ ಮಾಡಿದ್ದಾರೆ. ವೀರಪ್ಣ ಮೊಯ್ಲಿ ಸರ್ಕಾರದ ಅವಧಿಯಲ್ಲಿ  1993ರಿಂದ 95ರವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. 2001ರಿಂದ 2004ರವರೆಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದರು.

ಕೌಜಲಗಿ ಅವರು ಆರು ಭಾರಿ ಶಾಸಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಸಚಿವರಾಗಿ, ವಿಧಾನಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸೇನೆಯಲ್ಲೂ ಸೇವೆ ಸಲ್ಲಿಸಿದ್ದ, ಅವರು, ಸಜ್ಜನಿಕೆಗೆ ಹೆಸರಾಗಿದ್ದರು. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಕುಟುಂಬ ವರ್ಗಕ್ಕೆ ಹಾಗೂ ಕಾಂಗ್ರೆಸ್ ಕಾರ್ಯರಿಗೆ ಭಗವಂತ ಕರುಣಿಸಲಿ.
-ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ

ಲಿಂಗಾಯುತ ಸಮಾಜದ ಹಿರಿಯ ಮುಖಂಡ, ಸಹಕಾರಿ ಕ್ಷೇತ್ರ ಮುಖಂಡ ಹಾಗೂ ಕಾಂಗ್ರೆಸ್ ಪ್ರಭಾವಿ ಮುಖಂಡರಲ್ಲಿ ಒಬ್ಬರಾದ ಮಾಜಿ ಸಚಿವ ಕೌಜಲಗಿ ಅವರ ನಿಧನದಿಂದ ಜಿಲ್ಲೆಗೆ ಮತ್ತು ಉತ್ತರ ಕರ್ನಾಟಕದ ಜನತೆಗೆ ತುಂಬಲಾರದ ಹಾನಿಯಾಗಿದೆ.
-ಡಾ.ಪ್ರಭಾಕರ ಕೋರೆ, ರಾಜ್ಯ ಸಭೆ ಸದಸ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.