ನನ್ನ ರಾಜಿನಾಮೆಯನ್ನು ಮೋದಿ ತಡೆದರು: ದೇವೇಗೌಡ

ಹಾಸನ: ತಾವು ಲೋಕಸಭೆ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡುವುದನ್ನು ಪ್ರಧಾನಿ ನರೇಂದ್ರ ಮೋದಿ ತಡೆದರು ಎಂದು ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಖಾಸಗಿ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಸ್ವಂತ ಶಕ್ತಿಯಿಂದ 280 ಸೀಟುಗಳನ್ನು ತೆಗೆದುಕೊಂಡರೆ ರಾಜಕೀಯವಾಗಿ ನಿವೃತ್ತಿ ಹೊಂದುವುದಾಗಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಹೇಳಿದ್ದೆ. ಮೋದಿ ಕೂಡ ತುಮಕೂರಿನಲ್ಲಿ ಅದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ಚುನಾವಣೆ ಫಲಿತಾಂಶದ ಬಿಜೆಪಿ ಸರ್ಕಾರ ರಚಿಸಲು ಬೇಕಾದ ಸೀಟುಗಳನ್ನು ಪಡೆದ ನಂತರ, ನಾನು ಮತ್ತು ಸಂಸದ ಸಿ.ಎಸ್ ಪುಟ್ಟರಾಜು ದೆಹಲಿಯಲ್ಲಿ ಮೋದಿ ಅವರನ್ನು ಭೇಟಿ ಮಾಡಿದೆವು. ಆಗ, ನಾನು ಮೊದಲೇ ಹೇಳಿದಂತೆ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ, ಆಗಿನ ರಾಜಕೀಯ ಪರಿಸ್ಥಿತಿಗೆ ಹಾಗೇ ಮಾತನಾಡಿದ್ದು ನಿಜ ಎಂದು ಹೇಳಿದೆ ಎಂದರು.
ಕೂಡಲೇ ಎದ್ದು ನಿಂತ ಮೋದಿ ಅವರು, ಗೌಡಾಜಿ, ನೀವು ಪ್ರಧಾನಿಯಾಗಿ ನಡೆಸಿದ ಆಡಳಿತ ಮತ್ತು ಸಾಧನೆಗಳ ಬಗ್ಗೆ ಉನ್ನತಾಧಿಕಾರಿಗಳ ಮೂಲಕ ಮಾಹಿತಿ ಪಡೆದಿದ್ದೇನೆ. ಕ್ಲಿಷ್ಟ ಪರಿಸ್ಥಿತಿಯಲ್ಲಿ ನನಗೆ ನಿಮ್ಮಂಥವರ ಸಲಹೆ, ಮಾರ್ಗದರ್ಶನ ಬೇಕಿದೆ. ನೀವು ಯಾವುದೇ ಕಾರಣಕ್ಕೂ ರಾಜಿನಾಮೆ ನೀಡುವ ಮಾತನಾಡಬೇಡಿ ಎಂದು ಮನವಿ ಮಾಡಿದರು. ಈ ಕಾರಣದಿಂದ ರಾಜಿನಾಮೆ ನೀಡಲಿಲ್ಲ ಎಂದು ವಿವರಿಸಿದರು.
ಮೋದಿ ಅವರು ನನ್ನ ಮನವಿ ಮನ್ನಿಸಿ ರಾಜ್ಯದ ರೈಲ್ವೆ ಯೋಜನೆಗಳಿಗೆ 165 ಕೋಟಿ ರುಪಾಯಿ ಬಿಡುಗಡೆ ಮಾಡಿದರು. ಹಾಸನ- ಬೆಂಗಳೂರು ರೈಲ್ವೆ ಮಾರ್ಗ ಕಾಮಗಾರಿ ಪೂರ್ಣ ಮಾಡುವ ಭರವಸೆ ನೀಡಿದ್ದಾರೆ. ಕಾವೇರಿ- ಕೃಷ್ಣ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ದೇವೇಗೌಡರು ತಿಳಿಸಿದರು.
ಗುರು-ಶಿಷ್ಯರ ಸಮಾಗಮ: ಇದೇ ಕಾರ್ಯಕ್ರಮದ ವೇದಿಕೆಯಲ್ಲಿ ದೇವೇಗೌಡ ಮತ್ತು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ ಇಬ್ರಾಹಿಂ 15 ವರ್ಷದ ಬಳಿಕ ಒಟ್ಟಿಗೆ ಕಾಣಿಸಿಕೊಂಡರು. ಗುರು-ಶಿಷ್ಯರು ಪರಸ್ಪರ ಆಲಂಗಿಸಿಕೊಂಡಾಗ ಅಲ್ಲಿದ್ದವರಿಗೆಲ್ಲಾ ಆಶ್ಚರ್ಯ ಗುರು. ತಾನು ಪ್ರಧಾನಿಯಾಗಿದ್ದಾಗ ಯಶಸ್ವಿಯಾಗಿ ಸಾಥ್ ನೀಡಿದ ಎಂದು ಶಿಷ್ಯನನ್ನು ಹೊಗಳಿದರು. ಶಿಷ್ಯ, ಗುರುವಿಗೆ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ರಾಜಯೋಗ ಬರಲಿ ಎಂದು ಹಾರೈಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


