ಬೀದಿ ಬೀದಿಗಳಲ್ಲಿ ಸುಲಿಗೆ ಕೇಂದ್ರಗಳು!

ಸ್ಥಳೀಯ ನಗರ ಪ್ರಾಧಿಕಾರದಲ್ಲಿ ಪಡೆದ ಅನುಮತಿಯೇ ಅಂತಿಮ, ಎಲ್ಕೆಜಿಗೆ ಮಾತ್ರ ಶಿಕ್ಷಣ ಇಲಾಖೆಯಿಂದ ಅನುಮತಿ
ಬೆಂಗಳೂರು: ಬೀದಿಗೊಂದು ಪ್ಲೇಹೋಮ್ ಹಾಗೂ ಬೇಬಿ ಕೇರ್ಗಳು ಇಂದು ರಾಜ್ಯದ ಎಲ್ಲ ನಗರಗಳಲ್ಲಿ ಕಾಣಸಿಗುತ್ತವೆ. ಆದರೆ ಇಂಥ ಸಂಸ್ಥೆಗಳ ಮೇಲೆ ನಿಗಾಇಡಲು ಸರ್ಕಾರಿ ಪ್ರಾಧಿಕಾರಗಳೇ ಇಲ್ಲ!
ಬೆಂಗಳೂರು ನಗರವೊಂದರಲ್ಲೇ 3 ಸಾವಿರಕ್ಕೂ ಅಧಿಕ ಬೇಬಿಕೇರ್ ಹಾಗೂ ಪ್ಲೇಹೋಮ್ಗಳು ನಾನಾ ಹೆಸರಿನಲ್ಲಿವೆ. ಆದರೆ ಅಲ್ಲ ನೀಡುವ ಶಿಕ್ಷಣ ಹಾಗೂ ಕಲಿಕಾ ವ್ಯವಸ್ಥೆ ಬಗ್ಗೆ ಶಿಕ್ಷಣ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನಿಗಾವಹಿಸುತ್ತಿಲ್ಲ. ದುಡ್ಡು ಸುಲಿಯುವ ಕೇಂದ್ರಗಳಾಗಿ ಅವು ಪರಿವರ್ತನೆಗೊಂಡಿವೆ. ಯಾವುದೇ ಅರ್ಹತೆಗಳಿಲ್ಲದೇ ಫ್ರಾಂಚೈಸಿಗಳ ಹೆಸರಲ್ಲಿ ಇಂತಹ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ.
ಈ ಅವ್ಯವಸ್ಥೆ ಕುರಿತಂತೆ ಪ್ರಾಥಮಿಕ ಶಿಕ್ಷಣ ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖೆಯಲ್ಲಿ ವಿಚಾರಿಸಿದಾಗ ಆಘಾತಕಾರಿ ವಿಷಯ ಬಹಿರಂಗಗೊಂಡಿದೆ. ಪ್ರಾಥಮಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅನುಮತಿ ನೀಡುತ್ತಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯಾದ್ಯಂತ ಅಂಗನವಾಡಿಗಳು ನಡೆಯುತ್ತವೆ. ಆದರೆ ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ನಡೆಸುವ ಈ ಪ್ಲೇ ಹೋಮ್ ಹಾಗೂ ಬೇಬಿ ಕೇರ್ಗಳನ್ನು ಮಾತ್ರ ಕೇಳುವವರೇ ಇಲ್ಲ.
ಸುರಕ್ಷಾ ಕ್ರಮಗಳ ಬಗ್ಗೆ ನಿಗಾ ಇಲ್ಲ
ಈ ಸಂಸ್ಥೆಗಳಲ್ಲಿ ಮಕ್ಕಳಿಗೆ ನಿದ್ರೆ ಬರುವಂತಹ ಮದ್ದುಗಳನ್ನು ನೀಡಿ ಸಂಭಾಳಿಸುತ್ತಾರೆ ಎಂಬ ಆರೋಪಗಳು ಆಗಾಗ ಕೇಳಿಬರುತ್ತಿವೆ. ಇದರ ಜತಗೆ ಬೆಂಗಳೂರು ಪೊಲೀಸ್ ಅಥಾವ ಶಿಕ್ಷಣ ಇಲಾಖೆ ಈ ಸಂಸ್ಥೆಗಳಿಗೆ ಯಾವುದೇ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಸೂಚನೆ ನೀಡಿಲ್ಲ. ಈ ಸಂಸ್ಥೆಗಳು ತಮಗೆ ತೋಚಿದಂತೆ ವ್ಯವಸ್ಥೆ ರೂಪಿಸಿಕೊಂಡು ಶಿಕ್ಷಣ ನೀಡುತ್ತವೆ. ಮಕ್ಕಳ ಸುರಕ್ಷೆ ಕುರಿತು ನಿಗಾ ಇಡುವುದು ಸರ್ಕಾರದ ಕರ್ತವ್ಯ. ಗಂಡಹೆಂಡತಿಯರಿಬ್ಬರೂ ಕೆಲಸ ಮಾಡುವಾಗ ತಮ್ಮ ಮಕ್ಕಳನ್ನು ಅನಿವಾರ್ಯವಾಗಿ ಪ್ಲೇಹೋಮ್ಗಳಿಗೆ ಸೇರಿಸಬೇಕಾಗುತ್ತದೆ. ಶಾಲೆಯಲ್ಲಿ ಏನು ನಡೆಯುತ್ತಿದೆ ಎಂಬ ಅರಿವು ಮಕ್ಕಳಿಗೆ ಇರುವುದಿಲ್ಲ. ಅದಾಗ್ಯೂ ಅಂತಹ ಸಂಸ್ಥೆಗಳ ಗುಣಮಟ್ಟ ಹಾಗೂ ಸುರಕ್ಷಾ ಕ್ರಮಗಳ ಬಗ್ಗೆ ನಿಗಾಇಡುವುದು ತಮ್ಮ ಕೆಲಸ ಎನ್ನುವುದು ಎರಡೂ ಇಲಾಖೆಗಳಿಗೆ ತಿಳಿದಿಲ್ಲ. ಬದಲಾಗಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡುತ್ತಾರೆ.
ಕೋರ್ಸ್ ಪೂರೈಸದ ಶಿಕ್ಷಕರು
ಬೇಬಿ ಕೇರ್ ಹಾಗೂ ಪ್ಲೇ ಹೋಮ್ ಆರಂಭಿಸುವಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ನಮೂನೆ ಪಡೆದುಕೊಂಡು ಅರ್ಜಿ ಸಲ್ಲಿಸಬೇಕು. ಈ ಸಂಬಂಧ ಸರ್ಕಾರದ ವೆಬ್ಸೈಟ್ನಲ್ಲಿ ಅರ್ಜಿಯೂ ಲಭ್ಯವಿದೆ. ಆದರೆ ಮಹಿಳಾ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಯಾವುದೇ ವಿಭಾಗದಲ್ಲಿ ಈ ಸಂಸ್ಥೆಗಳ ನಿರ್ವಹಣೆಯಾಗುತ್ತಿಲ್ಲ. ಹೊಸದಾಗಿ ಸಂಸ್ಥೆಗಳನ್ನು ಆರಂಭಿಸುವವರು ಸ್ಥಳೀಯ ಪ್ರಾಧಿಕಾರಗಳಾದ ಬಿಬಿಎಂಪಿಯಂತಹ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿ ಒಪ್ಪಿಗೆ ಪಡೆದುಕೊಳ್ಳುತ್ತಾರೆ. ಈ ಪ್ರಾಧಿಕಾರಗಳು ಕೇವಲ ಅಲ್ಲಿಯ ಕಟ್ಟಡ ಹಾಗೂ ಜಾಗಗಳನ್ನು ಪರಿಶೀಲಿಸಿ ಒಪ್ಪಿಗೆ ನೀಡುತ್ತವೆ.
ಸಾಮಾನ್ಯವಾಗಿ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಮಾಂಟೆಸರಿ ಹಾಗೂ ಕಿಂಡರ್ಗಾರ್ಟನ್ ಮಾದರಿಯ ಶಿಕ್ಷಣ ನೀಡಲಾಗುತ್ತದೆ. ಮಕ್ಕಳಿಗೆ ವಿದ್ಯೆ ಕಲಿಸಬೇಕಾದವರು ಈ ಶಿಕ್ಷಣ ಕುರಿತ ಕೋರ್ಸ್ಗಳನ್ನು ಕಡ್ಡಾಯವಾಗಿ ಮಾಡಿಕೊಂಡಿರಬೇಕು. ಆದರೆ ಪ್ಲೇಹೋಮ್ ನಡೆಸುವ ಯಾವುದೇ ಸಂಸ್ಥೆಗಳಲ್ಲಿ ಕೋರ್ಸ್ ಮುಗಿಸಿರುವ ಶಿಕ್ಷಕರನ್ನು ನೇಮಿಸಿಕೊಳ್ಳುವುದಿಲ್ಲ. ಆದರೆ ಪ್ರತಿ ತಿಂಗಳು ಸಾವಿರಗಟ್ಟಲೆ ಶುಲ್ಕವನ್ನು ಮಾತ್ರ ವಸೂಲಿ ಮಾಡುತ್ತಾರೆ.
ಇವರೇನಂತಾರೆ?
ಈ ಸಂಸ್ಥೆಗಳು ನಮ್ಮ ಅಧೀನಕ್ಕೆ ಬರುವುದಿಲ್ಲ. ಪೂರ್ವ ಪ್ರಾಥಮಿಕ ಶಾಲೆಯ ಒಂದು ವರ್ಷ ಮಾತ್ರ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಪ್ಲೇಹೋಮ್ ಹಾಗೂ ಬೇಬಿ ಕೇರ್ಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುತ್ತವೆ.
- ಆನಂದ್, ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ
ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಗೆ ಈ ಸಂಬಂಧ ಮನವಿ ಸಲ್ಲಿಸಿ ಸುಸ್ತಾಗಿದ್ದೇವೆ. ಎರಡೂ ಇಲಾಖೆಗಳು ಜಂಟಿಯಾಗಿ ಕೆಲಸ ಮಾಡಿ ನಾಯಿಕೊಡೆಗಳಂತೆ ಪ್ರಾರಂಭವಾಗುತ್ತಿರುವ ಸಂಸ್ಥೆಗಳ ನಿಯಂತ್ರಣ ಹಾಗೂ ಮಕ್ಕಳ ಸುರಕ್ಷೆಗೆ ಗಮನ ನೀಡಬೇಕಿದೆ.
-ನಾಗಸಿಂಹರಾವ್, ಆರ್ಟಿಇ ಕಾರ್ಯಪಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


