

ಬೆಂಗಳೂರು: ಬಿಬಿಎಂಪಿ ಚುನಾವಣೆ ಮೇ 30ರೊಳಗೆ ನಡೆಸುವಂತೆ ಹೈಕೋರ್ಟ್‍ನ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ಸೋಮವಾರಕ್ಕೆ ಮುಂದೂಡಿದೆ.
ಸರ್ಕಾರ ಪಾಲಿಕೆಯನ್ನು ಮೂರು ಭಾಗ ಮಾಡಲು ಹೊರಟಿದೆ. ಪಾಲಿಕೆಗೆ ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸರ್ಕಾರ ಪಾಲಿಕೆಯನ್ನು ಮೂರು ಭಾಗ ಮಾಡಿದ್ದೇ ಆದಲ್ಲಿ ಬಿಬಿಎಂಪಿಗೆ ತನ್ನ ಅಸ್ತಿತ್ವವೇ ಉಳಿಯುವುದಿಲ್ಲ. ಈ ಮಧ್ಯೆ ಚುನಾವಣೆ ನಡೆದರೆ ಸಾರ್ವಜನಿಕ ಹಣ ದುಂದು ವೆಚ್ಚ ಮಾಡಿದಂತಾಗುತ್ತದೆ ಎಂದು ಆರೋಪಿಸಿ ಮುರಳೀಧರ್ ಜಿ. ರಾವ್ ಎಂಬುವರು ಮೇಲ್ಮನವಿ ಅರ್ಜಿ ದಾಖಲಿಸಿದ್ದಾರೆ. ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲಾ ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ಮುಂದೂಡಿದೆ.
ಪಾಲಿಕೆ ಈಗಾಗಲೇ ಆರ್ಥಿಕ ನಷ್ಟದಲ್ಲಿದೆ. ತ್ಯಾಜ್ಯ ಸಮಸ್ಯೆ ಕೂಡ ಪಾಲಿಕೆಗೆ ತಲೆನೋವಾಗಿದೆ. ಅಂತಿಮವಾಗಿ ನಾಗ ರೀಕರು ಇದರಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ತ್ಯಾಜ್ಯದ ಸಮಸ್ಯೆಗೆ ಸಂಬಂಧಿಸಿದಂತೆ ಈ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ವಾರ್ಡ್ ಮಟ್ಟದ ಸಮಿತಿ ರಚಿಸುವಂತೆ ನಿರ್ದೇಶನ ನೀಡಿತ್ತು. ಆದರೆ, ವಾರ್ಡ್ ಮಟ್ಟದ ಸ್ಥಳೀಯ ಸಮಿತಿ ರಚನೆ ಮಾಡಿಯೇ ಇಲ್ಲ. ಹೀಗಾಗಿ ಸದ್ಯಕ್ಕೆ ಚುನಾವಣೆ ನಡೆಸುವುದು ಸರಿಯಲ್ಲ.
ಚುನಾವಣೆ ನಡೆಸು ವಂತೆ ಕೋರಿ ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶಕ್ಕೆ ತಡೆ ನೀಡಬೇಕು. ಈ ಎಲ್ಲಾ ಗೊಂದಲಗಳಿಗೆ ಪರಿಹಾರ ದೊರೆತ ನಂತರ ಚುನಾವಣೆ ನಡೆಸಲು ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಮೇ 30ರೊಳಗಾಗಿ ಪೂರ್ಣಗೊಳಿಸುವಂತೆ ಹೈಕೋರ್ಟ್‍ನ ಏಕಸದಸ್ಯ ಪೀಠ ಮಾ.30ರಂದು ಆದೇಶ ಹೊರಡಿಸಿತ್ತು.