ಪರಾರಿಯಾದ ಕೈದಿ ಸೆರೆಗೆ ವಿಶೇಷ ತಂಡ

ಜೈಲಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಪ್ಪನ ಅಗ್ರಹಾರ ಜೈಲಿನಿಂದ ಪರಾರಿಯಾಗಿದ್ದ ಕೈದಿ ಮಂಜುನಾಥನ ಬಂಧನಕ್ಕೆ ಎರಡು ವಿಶೇಷ ತಂಡಗಳು ಶೋಧಕ್ಕಿಳಿದಿವೆ. ಒಂದು ತಂಡ ಚಿತ್ರದುರ್ಗ, ಮತ್ತೊಂದು ತಂಡ ಬೆಂಗಳೂರಿನ ನಾನಾ ಕಡೆಗಳಲ್ಲಿ ತಪಾಸಣೆ ನಡೆಸಿದೆ...
ಪರಾರಿಯಾದ ಕೈದಿ ಸೆರೆಗೆ ವಿಶೇಷ ತಂಡ
ಪರಾರಿಯಾದ ಕೈದಿ ಸೆರೆಗೆ ವಿಶೇಷ ತಂಡ
Updated on: 

ಬೆಂಗಳೂರು: ಜೈಲಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಪ್ಪನ ಅಗ್ರಹಾರ ಜೈಲಿನಿಂದ ಪರಾರಿಯಾಗಿದ್ದ ಕೈದಿ ಮಂಜುನಾಥನ ಬಂಧನಕ್ಕೆ ಎರಡು ವಿಶೇಷ ತಂಡಗಳು ಶೋಧಕ್ಕಿಳಿದಿವೆ. ಒಂದು ತಂಡ ಚಿತ್ರದುರ್ಗ, ಮತ್ತೊಂದು ತಂಡ ಬೆಂಗಳೂರಿನ ನಾನಾ ಕಡೆಗಳಲ್ಲಿ ತಪಾಸಣೆ ನಡೆಸಿದೆ.

ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಚಿತ್ರದುರ್ಗ ಮೂಲದ ಮಂಜುನಾಥ್ ಶುಕ್ರವಾರ ಸಂಜೆ ಅಧಿಕಾರಿ ಮತ್ತು ಸಿಬ್ಬಂದಿಗೆ ಮಂಕುಬೂದಿ ಎರಚಿ ಜೈಲಿನ ಮುಖ್ಯದ್ವಾರದಿಂದಲೇ ಪರಾರಿಯಾಗಿದ್ದ. ಒಂದು ತಂಡ ಶುಕ್ರವಾರ ರಾತ್ರಿಯೇ ಚಿತ್ರದುರ್ಗ ತಲುಪಿ ತಪಾಸಣೆ ನಡೆಸಿದೆ. ಮಂಜುನಾಥ್ ಚಿತ್ರದುರ್ಗಕ್ಕೆ ಬಂದು ಕುಟುಂಬ ಸದಸ್ಯರನ್ನು ಭೇಟಿ ಮಾಡಿಲ್ಲ ಎನ್ನುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಆ ತಂಡ ಬೆಂಗಳೂರಿಗೆ ವಾಪಸ್ಸಾಗಿದೆ.

ಆತ ಬೆಂಗಳೂರಲ್ಲೇ ತಲೆಮರೆಸಿಕೊಂಡಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಶಂಕಿಸಿರುವ ಮತ್ತೊಂದು ತಂಡ ನಗರದ ನಾನಾ ಕಡೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಜೈಲಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ಜೈಲಿನಲ್ಲಿದ್ದ ಮಂಜುನಾಥನನ್ನು ನೋಡಲು 10 ದಿನಗಳ ಹಿಂದೆ ಪತ್ನಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಸಂದರ್ಶನಕ್ಕೆ ಬಂದಿದ್ದರು. ಆಕೆ ಜೈಲಿಗೆ ಆಗಮಿಸಿರುವ ದಾಖಲೆಗಳಿವೆ. ಆದರೆ ಆಕೆಯ ವಿಳಾಸ ದಾಖಲಾಗಿಲ್ಲ. ಆಕೆ ಮಂಜುನಾಥನ ಪತ್ನಿ ಆಗಿರಲಿಲ್ಲ ಎನ್ನುವುದು ಗೊತ್ತಾಗಿದೆ. ಆದ್ದರಿಂದ ಆಕೆಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ಆಕೆಯೇ ಮಂಜುನಾಥನಿಗೆ ತಪ್ಪಿಸಿಕೊಳ್ಳಲು ನೆರವು ನೀಡಿರುವ ಸಾಧ್ಯತೆಗಳೂ ಇವೆ ಅಥವಾ ಮಂಜುನಾಥ್ ಪರಾರಿಯಾದ ನಂತರ ಆಕೆಯ ಆಶ್ರಯ ಪಡೆದಿರುವ ಸಾಧ್ಯತೆಗಳೂ ಇವೆ. ಆದ್ದರಿಂದ ಆ ಮಹಿಳೆಯ ಸುಳಿವು ಪತ್ತೆ ಹಚ್ಚಲು ಶ್ರಮಿಸುತ್ತಿದ್ದೇವೆ. ಪರಾರಿಯಾಗಿರುವ ಕೈದಿ ಮಂಜುನಾಥನ ಭಾವಚಿತ್ರವನ್ನು ಈಗಾಗಲೇ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ರವಾನಿಸಿದ್ದು, ನಿಗಾ ವಹಿಸುವಂತೆ ನಿರ್ದೇಶಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶೋಧ ಕಾರ್ಯಚರಣೆ ತೀವ್ರಗೊಳಿಸಿರುವುದರ ಕುರಿತು ಮಾತನಾಡಿರುವ  ಪರಪ್ಪನ ಅಗ್ರಹಾರ ಜೈಲಿನ ಹಿರಿಯ ಅಧಿಕಾರಿಯೊಬ್ಬರು, ಆತ ಬಹಳಷ್ಟು ದಿನ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಪೊಲೀಸರ ಜತೆಗೆ ಜೈಲು ಸಿಬ್ಬಂದಿಯೂ ಶೋಧ ಕಾರ್ಯದಲ್ಲಿ ತೊಡಗಿದ್ದು ಆತ ಶೀಘ್ರದಲ್ಲೇ ಸಿಗಲಿದ್ದಾನೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com