

ಬೆಂಗಳೂರು: 17 ವರ್ಷದ ಬಾಲಕಿ ಅಪಹರಿಸಲು ಯತ್ನಿಸಿದ್ದ ಮಹಿಳೆಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ರಾತ್ರಿ ಸುಮಾರು 8 ಗಂಟೆಗೆ ಈ ಘಟನೆ ನಡೆದಿದೆ. ಚಾಮರಾಜಪೇಟೆ ವಾಲ್ಮೀಕಿ ನಗರದ ನಿವಾಸಿ ಫರಾನಾ ಬಂಧಿತಳು. ರಾತ್ರಿ 8 ಗಂಟೆಯ ಹೊತ್ತಿಗೆ ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ಮೂಲಕ ತಮ್ಮ ನಿವಾಸದ ಬಳಿಯೋ ಪರಿಚಯವಿದ್ದ ಬಾಲಕಿ ಶಂಶದಾಳನ್ನು ದೆಹಲಿಗೆ ಕರೆದೊಯ್ಯುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ. ವಾಲ್ಮೀಕಿ ನಗರದ ತನ್ನ ನಿವಾಸದಲ್ಲಿ ಅಗರಬತ್ತಿ ತಯಾರಿಸುವ ಫರಾನಾ, ತನ್ನ ಮನೆಯ ಸುತ್ತಮುತ್ತಲ ಮನೆಯವರಿಗೆ ಅನುಮಾನ ಬಾರದಂತೆ ಬಾಲಕಿಯನ್ನು ಅಪಹರಿಸಲು ತಯಾರಿ ನಡೆಸಿದ್ದಳು.
ಸೋಮವಾರ ಸಂಜೆ ಶಂಶದಾಳನ್ನು ತನ್ನ ಮನೆಗೆ ಕರೆತಂದಿದ್ದಳು. ಅಲ್ಲಿಂದ ರಾತ್ರಿ 8 ಗಂಟೆಯೊಳಗಾಗಿ ನಗರ ಕೇಂದ್ರ ರೈಲು ನಿಲ್ದಾಣಕ್ಕೆ ತೆರಳಿ, ಅಲ್ಲಿ ಇಬ್ಬರಿಗೂ ದೆಹಲಿ ಟಿಕೆಟ್ ಪಡೆದು, ರೈಲಿಗಾಗಿ ಕಾಯುತ್ತಿದ್ದಳು. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಪೊಲೀಸರು, ರೈಲು ನಿಲ್ದಾಣಕ್ಕೆ ತೆರಳಿ ಶೋಧ ನಡೆಸಿದಾಗ, ಫರಾನಾ ಸಿಕ್ಕಿಬಿದ್ದಳು. ನಂತರ ವಿಚಾರಣೆಗೆ ಒಳಪಡಿಸಿದಾಗ, ಬಾಲಕಿ ಶಂಶದಾಳನ್ನು ಆಕೆಯ ಪೊಷಕರಿಗೆ ಗೊತ್ತಾಗದಂತೆ ಅಪಹರಿಸಿ, ದೆಹಲಿಗೆ ಕೆರೆದುಕೊಂಡು ಹೋಗುತ್ತಿರುವುದು ಬಯಲಾಯಿತು. ಈ ಹಿನ್ನೆಲೆಯಲ್ಲಿ ಠಾಣೆಗೆ ಕರೆತಂದು, ಪ್ರಕರಣ ದಾಖಲಿಸಿಕೊಂಡು ನಂತರ ಬಾಲಕಿಯನ್ನು ಆಕೆಯ ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ರಮೇಶ್ ತಿಳಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಅನುಮಾನವಿದ್ದು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ನಿಜಾಂಶ ಹೊರಬರಬೇಕಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.