ತ್ರಿಭಜನೆಯ ರಾಜಕಾರಣ ಕೈ ಬಿಡಿ

ಬೆಂಗಳೂರು: ರಾಜ್ಯ ಸರ್ಕಾರ ರಾಜಕೀಯ ನಿಲ್ಲಿಸಿ, ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನ ನೇತೃತ್ವದಲ್ಲಿ ನಾಗರಿಕ ಸಂಘಟನೆಗಳು ಭಾನುವಾರ ಪ್ರತಿಭಟನೆ ನಡೆಸಿದವು.
ಬೆಳಗ್ಗೆ ಪುರಭವನದಲ್ಲಿ ಸಮಾವೇಶಗೊಂಡ ನಾನಾ ಸಂಘಟನೆಗಳು ಹಾಗೂ ಕ್ಷೇಮಾಭಿವೃದ್ಧಿ ಸಂಘಗಳು ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಸರ್ಕಾರದ ಕ್ರಮವನ್ನು ಖಂಡಿಸಿದವು. ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಸಂಘಟನೆಗಳ ಕಾರ್ಯಕರ್ತರು, ಕೂಡಲೇ ಚುನಾವಣೆ ನಡೆಸಬೇಕೆಂದು ಆಗ್ರಹಿಸಿದರು.
ಬಿಬಿಎಂಪಿ ಅವಧಿ ಮುಗಿಯಲು ಮೂರು ದಿನಗಳಿರುವಾಗ ಸೂಪರ್‍ಸೀಡ್ ಮಾಡಿದ ಸರ್ಕಾರದ ನಿರ್ಧಾರ ಅಕ್ರಮ, ಅನ್ಯಾಯ ಎಂದು ಖಂಡಿಸಿದರು. ಸರ್ಕಾರ ಪ್ರಜೆಗಳ ರಾಜಕೀಯ ಹಕ್ಕು ಕಸಿದುಕೊಂಡಿದೆ ಎಂದು ದೂರಿದರು. ಸರ್ಕಾರ ಚುನಾವಣೆ ಮುಂದೂಡುವ ಯತ್ನ ಬಿಟ್ಟು ಕೂಡಲೇ ರಾಜೇಂದ್ರಕುಮಾರ್ ಕಠಾರಿಯ ವರದಿ ಬಹಿರಂಗ ಪಡಿಸಬೇಕು. ಮುಂದಿನ ಚುನಾವಣೆಗಳಲ್ಲಿ ಸಚ್ಚಾರಿತ್ರ್ಯ ಇರುವವರಿಗೆ ಅವಕಾಶ ನೀಡಬೇಕು. ನಗರ ಯೋಜನಾ ಸಮಿತಿಗಳನ್ನು ನಡೆಸಿ ನಗರದ ಅಭಿವೃದ್ಧಿಗೆ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಆರಂಭದಲ್ಲಿ ಪ್ರತಿಭಟನಾಕಾರನ್ನು ಉದ್ದೇಶಿಸಿ ಮತನಾಡಿದ ನಮ್ಮ ಬೆಂಗಳೂರು ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಣಾಧಿಕಾರಿ ಶ್ರೀಧರ್ ಪಬ್ಬಿಶೆಟ್ಟಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಮೂರು ರೀತಿಯ ಮತದಾನ ಹಕ್ಕು ನೀಡಲಾಗುತ್ತದೆ. ಅದರಲ್ಲಿ ಸ್ಥಳೀಯ ಸಂಸ್ಧೆಗಳಿಗೆ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡುವುದೂ ಇದೆ. ಆದರೆ, ಇದನ್ನು ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಕಸಿದುಕೊಳ್ಳುತ್ತಿದೆ. ಸರ್ಕಾರ ನಿಗದಿತ ಅವಧಿಗೆ ಚುನಾವಣೆ ನಡೆಸದೆ ಅಡ್ಡದಾರಿಗಳನ್ನು ಹಿಡಿದು ಮತದಾರರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಸರ್ಕಾರ ಬಿಬಿಎಂಪಿ ಸೂಪರ್ ಸೀಡ್ ಮಾಡುವುದಕ್ಕೆ ನೀಡಿರುವ ಕಾರಣಗಳು ಹಾಸ್ಯಾಸ್ಪದವಾಗಿದೆ. ಹಿರಿಯ ಅಧಿಕಾರಿ ರಾಜೇಂದ್ರಕುಮಾರ್ ಕಠಾರಿಯಾ ಕೇವಲ 15 ದಿನಗಳಲ್ಲಿ ತನಿಖಾ ವರದಿ ನೀಡುತ್ತಾರೆ. ಅದನ್ನಾಧರಿಸಿ ಬಿಬಿಎಂಪಿಯನ್ನು ಸರ್ಕಾರ ಸೂಪರ್ ಸೀಡ್ ಮಾಡಿದೆ. ನಿಜಕ್ಕೂ ಇದನ್ನು ಯಾರೂ ನಂಬುವುದಿಲ್ಲ.
ಕೇವಲ ಚುನಾವಣೆ ಮುಂದೂಡುವ ಏಕೈಕ ಕಾರಣಕ್ಕೆ ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಿರುವುದು ದೊಡ್ಡ ತಪ್ಪು. ಸರ್ಕಾರಕ್ಕೆ ನಿಜಕ್ಕೂ ಇಚ್ಛಾಶಕ್ತಿ ಇದ್ದರೆ, ಅಕ್ರಮ ನಡೆಸಿರುವ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಐದು ವರ್ಷಗಳ ಲೆಕ್ಕಪರಿಶೋಧನಾ ವರದಿ ಪ್ರಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಶ್ರೀಧರ್ ಆಗ್ರಹಿಸಿದರು. ಸಿವಿಕ್ ಬೆಂಗಳೂರು ಸಂಸ್ಥೆಯ ಮುಖ್ಯಸ್ಥರಾದ ಕಾತ್ಯಾಯಿನಿ ಚಾಮರಾಜ್ ಮಾತನಾಡಿ, `ಬಿಬಿಎಂಪಿ ಚುನಾವಣೆಯನ್ನು 6 ತಿಂಗಳ ವರೆಗೂ ಮುಂದೂಡಬಹುದು ಎಂಬ ದುರುದ್ದೇಶಕ್ಕೆ ಬಿಬಿಎಂಪಿಯನ್ನು ಸೂಪರ್‍ಸೀಡ್ ಮಾಡಿರುವುದು ಅಕ್ರಮ ಮತ್ತು ಅನ್ಯಾಯ' ಎಂದು ಖಂಡಿಸಿದರು.
ಬಿಬಿಎಂಪಿ ಚುನಾವಣೆ ನಡೆಸುವಂತೆ ಈಗಾಗಲೇ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದೆ. ಆದರೂ ಸರ್ಕಾರ ಕೋರ್ಟ್‍ಗೆ ಗೌರವ ನೀಡದೆ ಹಠಕ್ಕೆ ಬಿದ್ದು ಚುನಾವಣೆ ಮುಂದೂಡಲು ಹೋಗಿದೆ. ಇದಿಷ್ಟು ಸಾಲದು ಎಂದು ಜನಾಭಿಪ್ರಾಯಕ್ಕೆ ವಿರುದ್ಧವಾಗಿ ವಿಭಜನೆಯನ್ನೂ ಮಾಡಲು ಮುಂದಾಗಿದೆ. ಇದನ್ನು ನಗರ ಎಲ್ಲಾ ಜನತೆ ವಿರೋಧಿಸಬೇಕು. ಪ್ರತಿಭಟಿಸಬೇಕು ಎಂದು ವಿನಂತಿಸಿದರು.
ಬಿಬಿಎಂಪಿ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರಗಳು ನಿಜಕ್ಕೂ ಅಪಾಯಕಾರಿಯಾಗಿದ್ದು, ಇದರಿಂದ ಸಂವಿಧಾನ ಅನುಷ್ಠಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರದ ನಿಲುವ ಪ್ರಶ್ನಿಸುವ ವಾರ್ಡ್ ಸಮಿತಿಗಳ ಅಭಿಪ್ರಾಯಕ್ಕೆ ಬೆಲೆ ನೀಡಬೇಕು ಎಂದು ಕಾತ್ಯಾಯಿನಿ ಹೇಳಿದರು. ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳ ಒಕ್ಕೂಟದ ಮುಖಂಡ ಸುಬ್ಬು ಹೆಗ್ಡೆ ಮಾತನಾಡಿ, ನಾಗರಿಕ ಸಂಸ್ಥೆಗಳ ಒತ್ತಾಯದಂತೆ ಸರ್ಕಾರ ಚುನಾವಣೆ ನಡೆಸಬೇಕು. ಇಲ್ಲದಿದ್ದರೆ ಮುಂದೆ ಕೆಟ್ಟು ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


