

ಬೆಂಗಳೂರು: ಲಗ್ಗೆರೆ ರಿಂಗ್ ರಸ್ತೆ ಡಾ.ರಾಜ್‍ಕುಮಾರ್ ಸಮಾಧಿ ಬಳಿ ಗಾರ್ಮೆಂಟ್ಸ್ ನೌಕರರನ್ನು ಕರೆದೊಯ್ಯುತ್ತಿದ್ದ ಗೂಡ್ಸ್ ಟೆಂಪೊ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮುಗುಚಿ ಬಿದ್ದ ಪರಿಣಾಮ 35 ನೌಕರರಿಗೆ ಗಾಯಗಳಾಗಿದ್ದು ಭಾರಿ ಅನಾಹುತ ತಪ್ಪಿದೆ.
ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಗೂಡ್ಸ್ ವಾಹನದಲ್ಲಿ ಕುರುಬರಹಳ್ಳಿಯಿಂದ ಬಾಂಬೆ ರೆಯಾನ್ ಗಾರ್ಮೆಂಟ್ಸ್ ಕಾರ್ಖಾನೆಗೆ 35 ನೌಕರರನ್ನು ಕರೆದೊಯ್ಯಲಾಗುತ್ತಿತ್ತು. ವಾಹನ ವೇಗವಾಗಿದ್ದ ಕಾರಣ ರಾಜ್ ಸಮಾಧಿ ಬಳಿ ತಿರುವಿನ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಒಬ್ಬರ ಮೇಲೊಬ್ಬರು ಬಿದ್ದ ಕಾರಣ ಹೊರ ಬರಲಾಗದೆ ನೌಕರರು ಪರದಾಡುತ್ತಿದ್ದರು. ಕೂಡಲೇ ನೆರವಿಗೆ ಸ್ಥಳೀಯರು ಧಾವಿಸಿದರು. ಅಲ್ಲದೇ ಬೇನೆಬಂಡಿ(ಆ್ಯಂಬುಲೆನ್ಸ್) ಹಾಗೂ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ನಾಲ್ಕು ಬೇನೆಬಂಡಿ(ಆ್ಯಂಬುಲೆನ್ಸ್)ಗಳು ಗಾಯಾಳುಗಳನ್ನು ನಂದಿನಿ ಬಡಾವಣೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಸಾಗಿಸಿವೆ. ಹೆಚ್ಚಿನ ಗಾಯಗಳಾಗಿದ್ದ 8 ಮಂದಿಯನ್ನು ಪೀಣ್ಯದಲ್ಲಿರುವ ಇಎಸ್‍ಐ ಆಸ್ಪತ್ರೆಗೆ ಸಾಗಿಸಲಾಯಿತು. ಅಪಘಾತ ಸಂಭವಿಸುತ್ತಿದ್ದಂತೆ ವಾಹನ ಬಿಟ್ಟು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನ ವಿರುದ್ಧ ನಿರ್ಲಕ್ಷ್ಯತನದ ಚಾಲನೆ ಪ್ರಕರಣ ದಾಖಲಿಸಲಾಗಿದೆ ಎಂದು ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಗಿರೀಶ್ ತಿಳಿಸಿದರು. ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.