ಹಾಡಹಗಲೇ ಅತ್ಯಾಚಾರ ಆರೋಪಿ ಬರ್ಬರ ಕೊಲೆ

ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಬ್ಬನ ಹತ್ಯೆ ನಡೆದಿದ್ದು, ಮತ್ತೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಬ್ಬನ ಹತ್ಯೆ ನಡೆದಿದ್ದು, ಮತ್ತೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಎಚ್‍ಎಎಲ್ ಹಾಗೂ ಪೀಣ್ಯ ಪೊಲೀಸ್ ಠಾಣೆಯಲ್ಲಿ ಈ ಘಟನೆಗಳು ಸಂಭವಿಸಿವೆ. ಕಳೆದ ಹದಿನೈದು ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಅತ್ಯಾ ಚಾರ ಆರೋಪಿಯನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಲಾಗಿದೆ. ಹೊಸೂರು ನಿವಾಸಿ ಸೈಯದ್ ಅಬ್ದುಲ್ (27) ಹತ್ಯೆಯಾದವರು. ಭಾನುವಾರ ಬೆಳಗ್ಗೆ ಸುಮಾರು 9 ಗಂಟೆಗೆ ಸೈಯದ್ ಎಚ್ ಎಎಲ್ ಮಾರುಕಟ್ಟೆ ಬಳಿ ನಡೆದು ಹೋಗುತ್ತಿದ್ದ ವೇಳೆ ದಾಳಿ ಮಾಡಿದ ದುಷ್ಕರ್ಮಿಯೊಬ್ಬ ಮಾರಕಾಸ್ತ್ರದಿಂದ ಇರಿದು ಹತ್ಯೆ ಮಾಡಿದ್ದಾನೆ. ಘಟನೆಯನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಗಾಯಗೊಂಡಿದ್ದ ಸೈಯದ್‍ನನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಎಚ್‍ಎಎಲ್‍ನ ಇಸ್ಲಾಂಪುರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸೈಯದ್, 2013ರಲ್ಲಿ ಅತ್ಯಾಚಾರ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪದಡಿ ಜೈಲಿಗೆ ಹೋಗಿದ್ದ. ಆತ ಜೈಲಿಗೆ ಹೋದ ಬಳಿಕ ಕುಟುಂಬದ ಸದಸ್ಯರು ತಮಿಳುನಾಡಿನ ಹೊಸೂರಿಗೆ ಹೋಗಿ ನೆಲೆಸಿದ್ದರು. ಈ ನಡುವೆ ಹೈಕೋರ್ಟ್‍ನಿಂದ ಜಾಮೀನು ಪಡೆದಿದ್ದ ಸೈಯದ್ 15 ದಿನಗಳ ಜೈಲಿನಿಂದ ಬಿಡುಗಡೆಯಾಗಿದ್ದ. ಅಲ್ಲದೆ, ಈತನೂ ಕುಟುಂಬ ಸದಸ್ಯರ ಜತೆ ಹೊಸೂರಿನಲ್ಲಿ ವಾಸಿಸುತ್ತಿದ್ದ. ಶನಿವಾರ ರಾತ್ರಿ ಇಸ್ಲಾಂಪುರಕ್ಕೆ ಬಂದು ಸಂಬಂಧಿಕರು ಹಾಗೂ ಸ್ನೇಹಿತರ ಆರೋಗ್ಯ ಕ್ಷೇಮ ವಿಚಾರಿಸಿಕೊಂಡು ರಾತ್ರಿ ಅಲ್ಲಿಯೇ ತಂಗಿದ್ದ. ಭಾನುವಾರ ಬೆಳಗ್ಗೆ  ಕೆಲಸ ನಿಮಿತ್ತ ಮಾರುಕಟ್ಟೆಗೆ ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಹಳೆ ವೈಷಮ್ಯ ಘಟನೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಡಿಸಿಪಿ ರೋಹಿಣಿ ಕಟೋಚ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಚ್‍ಎಎಲ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಿಯಲ್ ಎಸ್ಟೇಟ್ ಏಜೆಂಟ್‍ನ ಮೇಲೆ ಹಲ್ಲೆ: ರಿಯಲ್ ಎಸ್ಟೇಟ್ ಏಜೆಂಟ್
ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪೀಣ್ಯದ ನೆಲಗದರನಹಳ್ಳಿಯಲ್ಲಿ ನಡೆದಿದೆ. ಶ್ರೀಪತಿ(35) ಹಲ್ಲೆಗೊಳಗಾದವರು. ಶನಿವಾರ ರಾತ್ರಿ ಶ್ರೀಪತಿ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಮನೆ ಸಮೀಪದಲ್ಲೇ ಕಚೇರಿ ಇಟ್ಟುಕೊಂಡಿದ್ದ ಇವರು, ರಿಯಲ್ ಎಸ್ಟೇಟ್ ಜತೆಗೆ ಮನೆಗಳನ್ನು ಬಾಡಿಗೆ, ಭೋಗ್ಯಕ್ಕೆ ಕೊಡಿಸುವ ಬ್ರೋಕರ್ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು ಶನಿವಾರ ರಾತ್ರಿ ಸುಮಾರು  11 ಗಂಟೆಗೆ ಕಚೇರಿಯಿಂದ ಮನೆಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ನಾಲ್ಕೈದು ಮಂದಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಗಾಯಾಳು ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ನಂತರ ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಲಾಗುವುದು. ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com