

ಮೈಸೂರು: ಪಕ್ಕದ ಮನೆಯವರಿಂದ ನಿರಂತರ ಕಿರುಕುಳಕ್ಕೆ ಬೇಸತ್ತ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ತಾಲೂಕಿನ ಕೆ.ಹೆಮ್ಮನಹಳ್ಳಿ ಗ್ರಾಮ 17 ವರ್ಷದ ರಾಜೇಶ್ವರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವತಿ. ಪಕ್ಕದ ಮನೆಯವರು ಈಕೆಗೆ ನಿರಂತರ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ರಾಜೇಶ್ವರಿ ವಿರುದ್ಧ ಪಕ್ಕದ ಮನೆಯ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಆರೋಪ ಮಾಡಲಾಗಿತ್ತು. ಇದರಿಂದ ಮನನೊಂದ ರಾಜೇಶ್ವರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪಕ್ಕದ ಮನೆಯಲ್ಲಿದ್ದ ನಾಗೇಂದ್ರ ಎಂಬಾತನ ಪತ್ನಿ ಜ್ಯೋತಿ, ರಾಜೇಶ್ವರಿಯ ಮೇಲೆ ಅಕ್ರಮ ಸಂಬಂಧದ ಆರೋಪ ಹೊರಿಸಿದ್ದರು. ತನ್ನ ಪತಿ ನಾಗೇಂದ್ರನೊಂದಿಗೆ ರಾಜೇಶ್ವರಿಗೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿ ಆಕೆಗೆ ಬೆದರಿಕೆ ಹಾಕುತ್ತಿದ್ದರು.
ಅಷ್ಟೇ ಅಲ್ಲದೇ, ನನ್ನ ಸಾವಿಗೆ ರಾಜೇಶ್ವರಿ ಕಾರಣ ಎಂದು ಪತ್ರ ಬರೆದಿಟ್ಟು, ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಬೆದರಿಕೆ ಹಾಕಿದ್ದರು. ಇದರಿಂದ ಭಯಭೀತಳಾದ ರಾಜೇಶ್ವರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.