

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಸಿದ ಆರೋಪದ ಸಂಬಂಧ ಬಿಬಿಎಂಪಿ ಹೆಮ್ಮಿಗೆಪುರ ವಾರ್ಡ್ ನ ಜೆಡಿಎಸ್ ಅಭ್ಯರ್ಥಿ ಪಂಚಲಿಂಗಯ್ಯ ವಿರುದ್ಧ ಸಿಐಡಿ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸಿಎಂ ಧನಂಜಯ ಈ ಪ್ರಕರಣ ಸಿಐಡಿ ತನಿಖೆಗೆ ಅರ್ಹವಾಗಿದೆ ಎಂದು ನೀಡಿದ ಸಲಹೆ ಹಿನ್ನೆಲೆಯಲ್ಲಿ ಸಿಎಂ ಸೋಮವಾರ ತನಿಖೆಗೆ ಆದೇಶಿಸಿದ್ದಾರೆ. ಈಗ ಚುನಾವಣೆ ಥಳುಕು ಹಾಕಿಕೊಂಡಿದೆ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ನಮ್ಮ ಪಕ್ಷದ ಅಭ್ಯರ್ಥಿಗಳಲ್ಲಿ ಭಯ ಮೂಡಿಸಲು ಚುನಾವಣೆ ಹೊಸಿಲಲ್ಲಿ ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪ ಏನು? ಪಂಚಲಿಂಗಯ್ಯ ವಿರುದ್ಧ ಕೆಪಿಸಿಸಿ ಕಾನೂನು ಘಟಕ ಮುಖ್ಯವಾಗಿ 4 ಆರೋಪಗಳನ್ನು ದಾಖಲೆ ಸಮೇತ ಸಿಎಂ ಗೆ ಸಲ್ಲಿಸಿದೆ. ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ಬನಶಂಕರಿ 6 ನೇ ಹಂತದ ಹೆಮ್ಮಿಗೆಪುರದ ಸರ್ವೇ ನಂ. 64 / ಪಿ ರಲ್ಲಿ 10 ಗುಂಟೆ ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ಗೆ ವಂಚನೆ. ಸಾಗುವಳಿ ಚೀಟಿ ಮ್ಯುಟೇಷನ್ ನಲ್ಲಿ ತಮ್ಮ ಹೆಸರನ್ನು ಸೇರಿಸಿ ಭೂಮಿಯನ್ನು ಬಿಡಿಎ ಗೆ ಮಾರಿ ರೂ 6 ,02 812 ಪರಿಹಾರ ಮತ್ತು 60 -40 ನಿವೇಶನ ಪಡೆದಿರುವ ಆರೋಪ.
ಹೆಮ್ಮಿಗೆ ಪುರ ಗ್ರಾಪಂ ಸರ್ವೇ ನಂ 64 ಪಿಗೆ ನಕಲಿ ದಾಖಲೆ ಸೃಷ್ಟಿ. ಈ ಸರ್ವೇ ನಂಬರ್ 11 ಜನರ ಪೈಕಿ ಪಂಚಲಿಂಗಯ್ಯನವರ ಹೆಸರಿಲ್ಲ. ಅದರೂ ನಕಲಿ ದಾಖಲೆ. ಲೋಕಾಯುಕ್ತ ತನಿಖೆಯಿಂದ ಇದು ದೃಢಪಟ್ಟಿದೆ.
ತನಿಖೆಗೆ ಶಿಫಾರಸಾಗಿತ್ತು
ಬನಶಂಕರಿ ಎರಡನೇ ಹಂತದ ಬಡಾವಣೆ ನಿರ್ಮಾಣಕ್ಕೆ ಬಿಡಿಎ ಭೂಸ್ವಾಧೀನಕ್ಕೆ ಮುಂದಾದಾಗ ಸರ್ಕಾರಿ ಜಾಗವನ್ನೇ ನಕಲಿ ದಾಖಲೆ ಮೂಲಕ ಕಬಳಿಸಿ ಮಾರಾಟ ಮಾಡಿರುವುದು ಗಂಭೀರ ಆರೋಪ. ಇವರು ಹೆಮ್ಮಿಗೆಪುರ ಸುತ್ತಲಿನ ಪ್ರದೇಶಗಳಲ್ಲಿ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಕೆಪಿಸಿಸಿ ಕಾನೂನು ಘಟಕ ಶಿಫಾರಸು ಮಾಡಿತ್ತು.