

ಬೆಂಗಳೂರು: ಲೋಕಾಯುಕ್ತ ಕಚೇರಿ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೆಷ ತನಿಖಾ ತಂಡದ ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ವಿ ಭಾಸ್ಕರ್ ಸಹಚರ ರಾಜಶೇಖರ್ ಎಂಬಾತನನ್ನು ಎಸ್ಐಟಿ ಅಧಿಕಾರಿಗಳ ಮನವಿಯಂತೆ ಆರೋಪಿ ರಾಜಶೇಖರ್ ನನ್ನು ಆ.26 ವರೆಗೆ ವಶಕ್ಕೆ ಒಪ್ಪಿಸಿ ನ್ಯಾ. ವಿ.ಜಿ ಬೋಪಯ್ಯ ಆದೇಶಿಸಿದರು.
ಕೆಪಿಸಿಸಿ ಸದಸ್ಯ ಹಾಗೂ ಉದ್ಯಮಿ ಪಿ.ಎನ್ ಕೃಷ್ಣಮೂರ್ತಿ ನೀಡಿರುವ ದೂರಿಗೆ(ಕೇಸ್ ನಂ.60 /2015 ) ಸಂಕ್ಬಂಧಿಸಿದಂತೆ ರಾಜಶೇಖರ್ ನನ್ನು ಬಂಧಿಸಲಾಗಿದೆ. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಈತನನ್ನು ಬಂಧಿಸಲಾಯಿತು. ನಗರಕ್ಕೆ ಕರೆತಂದು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಗಿದೆ.
ಮಂಗಳವಾರ ಸಂಜೆ 4 ಗಂಟೆಗೆ ನ್ಯಾಯಾಲಯಕ್ಕೆ ಕರೆತಂದ ಎಸ್ಐಟಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
ರಾಜಶೇಖರ್ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಸಂಖ್ಯೆ ಎಂಟಕ್ಕೇರಿದೆ. ಕೃಷ್ಣಾ ಮೂರ್ತಿ ನೀಡಿರುವ ದೂರಿನಲ್ಲಿ ಆರೋಪಿ ರಾಜಶೇಖರ್ ನಾಲ್ಕನೇ ಆರೋಪಿಯಾಗಿದ್ದಾರೆ.
ಅಶ್ವಿನ್ ರಾವ್ ಮೊದಲನೇ ಆರೋಪಿಯಾಗಿದ್ದು ಭಾಸ್ಕರ್ ಮತ್ತು ಸಾದಿಕ್ ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿಯಾಗಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಮಂದಿ ಬಂಧನವಾಗುವ ಸಾಧ್ಯತೆ ಇದೆ.
ಬಂಧಿತ ರಾಜಶೇಖರ್, ದೂರುದಾರ ಕೃಷ್ಣ ಮೂರ್ತಿ ಮತ್ತು ಲೋಕಾಯುಕ್ತ ಪುತ್ರ ಅಶ್ವಿನ್ ರಾವ್ ಅವರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ. ಹಣದ ಬೇಡಿಕೆ ಪ್ರಕರಣದಲ್ಲಿ ಆರೋಪಿಯ ಪಾತ್ರ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಮಧ್ಯ ವಶಕ್ಕೆ ಪಡೆದಿರುವ ಸಾಇಕ್ ನನ್ನು ಎಸ್ಐಟಿ ಪೊಲೀಸರ ತಂಡವೊಂದು ತೀವ್ರ ವಿಚಾರಣೆಗೊಳಪಡಿಸಿದೆ.