ಬೆಂಗಳೂರು; ಲಾಲ್‍ಬಾಗ್‍ನಲ್ಲಿ ಹೆಜ್ಜೇನುಗಳ ದಾಳಿಗೆ ಬಾಲಕಿ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೆಲವು ತೀರ್ಮಾನಗಳನ್ನು
ಕೈಗೊಂಡಿದ್ದಾರೆ.
ಉದ್ಯಾನದಲ್ಲಿರುವ ಬೀಜ ಪರೀಕ್ಷೆ ಪ್ರಯೋಗಾಲಯದ ಮುಖ್ಯದ್ವಾರದ ಬಳಿ ಇರುವ ಜೇನುಗೂಡುಗಳನ್ನು ವಿಶೇಷ ತಜ್ಞರ ಸಲಹೆ ಮೇರೆಗೆ ಶನಿವಾರ ಸ್ಥಳಾಂತರಿಸಲಾಗುತ್ತದೆ. ಉಳಿದ ಮೂರು ಗೂಡುಗಳು ಇರುವ ಸ್ಥಳದಲ್ಲಿ ಸೂಚನಾ ಫಲಕಗಳನ್ನು ಹಾಕಲಾಗುತ್ತಿದ್ದು ನೆಟ್ ಹೌಸ್ ನಿರ್ಮಿಸುವ ಕುರಿತು ಚರ್ಚಿಸಲಾಗುತ್ತದೆ ಎಂದು ಇಲಾಖೆ ಜಂಟಿ ನಿರ್ದೇಶಕ ಡಾ. ಜಗದೀಶ್ ತಿಳಿಸಿದ್ದಾರೆ.
ಉದ್ಯಾನದ ಬೀಜ ಪರೀಕ್ಷಾ ಪ್ರಯೋಗಾಲಯ ಮುಖ್ಯದ್ವಾರ, ಪಶ್ಚಿಮ ದ್ವಾರ ಹಾಗೂ ಲತಾ ನರ್ಸರಿ ಸೇರಿದಂತೆ ಒಟ್ಟು ನಾಲ್ಕು ಕಡೆ ಜೇನುಗಳು ಗೂಡು ಕಟ್ಟಿವೆ. ಅಲ್ಲಿರುವ ಬೀಟೆ ಮರಗಳಲ್ಲಿ ಜೇನು ಗೂಡು ಕಟ್ಟಿರುವ ಕಾರಣ ಅಲ್ಲಿ ಕ್ಯಾಮೆರಾಗಳನ್ನು ಫ್ಲಾಷ್ ಮಾಡುವುದು ಹೆಚ್ಚು. ಉದ್ಯಾನದಲ್ಲಿ ಗೂಡುಗಳ ಆಸು ಪಾಸಿನಲ್ಲಿ ಸಿಗರೇಟ್ ಸೇದುವುದು, ಕಲ್ಲನ್ನು ಎಸೆಯುವುದು ಅಥವಾ ಕ್ಯಾಮೆರಾಗಳನ್ನು ಫ್ಲಾಷ್ ಮಾಡುತ್ತಿರುವುದು ಗೋಚರಿಸಿದಲ್ಲಿ, ತಕ್ಷಣ ಇಲಾಖೆ ಗಮನಕ್ಕೆ ತರಬೇಕು ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.
ಜೇನು ಗೂಡು ಕಟ್ಟಿರುವ ಸ್ಥಳಗಳಲ್ಲಿ ಬೀಡಿ, ಸಿಗರೇಟು ಇತ್ಯಾದಿಗಳನ್ನು ಸೇದಬಾರದು ಎಂಬ ಫಲಕಗಳನ್ನು ಮರಗಳ ಮುಂದೆ ಇರಿಸಲಾಗುತ್ತದೆ. ಈಗಾಗಲೇ ಫಲಕಗಳನ್ನು ಬರೆಸಲಾಗುತ್ತಿದೆ. ಇನ್ನು ಒಂದು ತಿಂಗಳೊಳಗಾಗಿ ಸಂಪೂರ್ಣ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಡಾ. ಜಗದೀಶ್ ವಿವರಿಸಿದರು.