

ಬೆಂಗಳೂರು: ಮುಂದಿನ ರಾಜಕೀಯ ಬೆಳವಣಿಗೆಯಲ್ಲಿ ತನ್ನ ಪಾತ್ರ ಮಹತ್ವವಾಗಿಸಿಕೊಳ್ಳುವ ಉದ್ದೇಶದಿಂದ ಜೆಡಿಎಸ್ ಕಾರ್ಪೊರೇಟರ್ ಗಳು ಕೇರಳಕ್ಕೆ ತೆರಳುವ ಮೂಲಕ ಇಡೀ ಬೆಳವಣಿಗೆಗೆ ಮಹತ್ವದ ತಿರುವು ನೀಡಿದ್ದಾರೆ.
ಶಾಸಕರಾದ ಜಮೀರ್ ಅಹ್ಮದ್, ಅಖಂಡ ನಿವಾಸಮೂರ್ತಿ, ಕೆ.ಗೋಪಾಲಯ್ಯ ನೇತೃತ್ವದಲ್ಲಿ 14 ಜೆಡಿಎಸ್ ಕಾರ್ಪೊರೇಟರ್ ಗಳು ಶನಿವಾರ ಸಂಜೆ ವಿಮಾನದ ಮೂಲಕ ಕೇರಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದಕ್ಕೂ ಮುನ್ನ, ಜೆಡಿಎಸ್‍ನ ಎಲ್ಲ 14 ಸದಸ್ಯರನ್ನು ಯುಬಿ ಸಿಟಿ ಬಳಿಯಿರುವ ತಮ್ಮ ಅತಿಥಿಗೃಹಕ್ಕೆ ಕರೆಸಿಕೊಂಡ ಶಾಸಕ ಜಮೀರ್ ಅಹ್ಮದ್, ತಕ್ಷಣವೇ ಕೇರಳಕ್ಕೆ ತೆರಳಲು ಸೂಚನೆ ನೀಡಿದರು. ನಾಲ್ಕು ಪ್ರತ್ಯೇಕ ವಿಮಾನಗಳಲ್ಲಿ ತೆರಳಲು 20 ಟಿಕೆಟ್‍ಗಳನ್ನು ಕಾಯ್ದಿರಿಸಲಾಗಿತ್ತು.
ಕೇರಳದಲ್ಲಿ ಈಗಾಗಲೇ 6 ಪಕ್ಷೇತರ ಸದಸ್ಯರು ರೆಸಾರ್ಟ್ ವೊಂದರಲ್ಲಿ ಉಳಿದುಕೊಂಡಿದ್ದು, ಜೆಡಿಎಸ್ ಸದಸ್ಯರು ಅವರನ್ನು ಸೇರಿಕೊಳ್ಳಲಿದ್ದಾರೆ. ಭಾನುವಾರ ಅಲ್ಲಿಗೆ ತೆರಳುವ ಶಾಸಕ ಜಮೀರ್ ಅಹ್ಮದ್ ಅವರೊಂದಿಗೆ ಸಭೆ ನಡೆಸಲಿದ್ದಾರೆ. ಮೇಯರ್ ಚುನಾವಣೆಯಂದು ವಾಪಾಸ್: ಮೊದಲನೇ ತಂಡ 6.30ರ ವಿಮಾನದಲ್ಲಿ, 2ನೇ ತಂಡ 7.30ರ ವಿಮಾನದಲ್ಲಿ, 3ನೇ ತಂಡ 8.30ರ ವಿಮಾನದಲ್ಲಿ ಹಾಗೂ ಕೊನೆಯ ತಂಡ 9.30ರ ವಿಮಾನದಲ್ಲಿ ಕೇರಳಕ್ಕೆ ತೆರಳಿದೆ. ಅಲ್ಲಿಂದ ಎಲ್ಲರೂ ಒಟ್ಟಾಗಿ ಕೊಚ್ಚಿಯಲ್ಲಿರುವ ಖಾಸಗಿ ರೆಸಾರ್ಟ್‍ಗೆ ತೆರಳಲಿದ್ದಾರೆ. ರೆಸಾಟ್ರ್ ನಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದ್ದು, ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯುವ ದಿನದಂದು ವಾಪಸ್ಸಾಗಲಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಯಾರ ಪರ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಅದನ್ನು ಪಕ್ಷದ ಮುಖಂಡರು ನಿರ್ಧರಿಸುತ್ತಾ
ರೆ. ಕೋಮುವಾದಿ ಪಕ್ಷಕ್ಕೆ ಅಧಿಕಾರ ನೀಡಬಾರದು ಎಂಬ ಕಾರಣಕ್ಕೆ ನಾವೆಲ್ಲಾ ಒಟ್ಟಾಗಿದ್ದೇವೆ. ಮೇಯರ್ ಚುನಾವಣೆಯ ದಿನದಂದು ಎಲ್ಲರೂ ಒಟ್ಟಾಗಿ ಬೆಂಗಳೂರಿಗೆ ಬರಲಿದ್ದಾರೆ ಎಂದರು.
ಚಾಲಕ ಜಮೀರ್
ಶಾಸಕ ಜಮೀರ್ ತಮ್ಮ ನ್ಯಾಷನಲ್ ಟ್ರಾವೆಲ್ಸ್‍ಗೆ ಸೇರಿದ ಬಸ್ಸನ್ನು ತಾವೇ ಚಾಲನೆ ಮಾಡಿಕೊಂಡು ಸದಸ್ಯರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ದರು. ಇಡೀ ಬೆಳವಣಿಗೆಯಲ್ಲಿ ಶಾಸಕ ಜಮೀರ್ ಮುಖ್ಯ ಪಾತ್ರವಹಿಸುತ್ತಿದ್ದು, ರಾಜಕೀಯ ಆಟಕ್ಕೆ ತಾವೇ ನಿಜವಾದ ಚಾಲಕರಾದಂತೆ ಕಂಡುಬಂತು. ಈ ಹಿಂದೆ ಬಿಜೆಪಿಯೊಂದಿಗೆ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸುವಾಗ ವಹಿಸಿದ್ದ ಸಾರಥಿ ಪಾತ್ರವನ್ನೇ ಜಮೀರ್ ಅಹ್ಮದ್ ನೆನಪಿಸಿದರು.