

ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರ ಸದ್ದು ಮಾಡುತ್ತಿದ್ದ ಕಳಸಾ ಬಂಡೂರಿ ಯೋಜನೆಯ ಹೋರಾಟ ಭಾನುವಾರ ರಾಜಧಾನಿ ಬೆಂಗಳೂರಿನಲ್ಲೂ ಗುಡುಗು ಎಬ್ಬಿಸಿತು. ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಭಾಗದಲ್ಲಿರುವ ಉತ್ತರ ಕರ್ನಾಟಕ ಸಂಘಟನೆಗಳು ಹಾಗೂ ಸ್ಥಳೀಯ ಕೆಲವು ಸಂಘಟನೆಗಳ ಜತೆಗೂಡಿ ಹೋರಾಟ ನಡೆಸಿದವು. ಅಷ್ಟೇ ಅಲ್ಲ. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹೋರಾಟದ ಬಿಸಿ ಸರ್ಕಾರಕ್ಕೂ ಮುಟ್ಟುವಂತೆ ಮಾಡಿದವು.
ಇದಕ್ಕೆ ಸ್ಪಂದಿಸಿದ ಸಚಿವರಾದ ಎಚ್.ಕೆ.ಪಾಟೀಲ್ ಮತ್ತು ದಿನೇಶ್ ಗುಂಡೂರಾವ್ ಸರ್ಕಾರದ ಪರವಾಗಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಹಾಗೆಯೇ ಮಹದಾಯಿ ನದಿ ತಿರುವು ಯೋಜನೆ ಜಾರಿಗೆ ಸರ್ಕಾರ ಬದಟಛಿವಾಗಿದೆ ಎಂದೂ ಪುನರುಚ್ಚರಿಸಿದರು. ಉತ್ತರ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ನಗರದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಸಮಾವೇಶಗೊಂಡ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಕಾರ್ಯಕರ್ತರು ಕಳಸಾ-ಬಂಡೂರಿ ನಾಲಾ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತು ಕ್ರಮಕೈಗೊಳ್ಳಬೇಕು ಎಂದ ಆಗ್ರಹಿಸಿದರು.
ಈ ಯೋಜನೆಯ ಮೂಲಕ ಮಹದಾಯಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಸಿಗಬೇಕಾಗಿರುವ ಪಾಲನ್ನು ಪಡೆಯಲು ಕಾನೂನು ಹೋರಾಟಕ್ಕೆ ಸರ್ಕಾರ ಮುಂದಾಗಬೇಕು. ಇದಕ್ಕೂ ಮುನ್ನ ಮಧ್ಯಂತರ ವರದಿ ನೀಡುವಂತೆ ನ್ಯಾಯಾಧಿಕರಣಕ್ಕೆ ಒತ್ತಾಯಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ 46 ದಿನಗಳಿಂದ ಕುಡಿಯುವ ನೀರಿಗಾಗಿ ಯೋಜನೆ ಅನುಷ್ಠಾನಗೊಳಿಸಬೇಕೆಂದು ಹೋರಾಟ ನಡೆಯುತ್ತಿದ್ದರೂ, ಸರ್ಕಾರ, ರಾಜಕೀಯ ನಾಯಕರು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಅಲ್ಲದೆ ಅಲ್ಲಿಗೆ ಭೇಟಿ ನೀಡಿಲ್ಲದಿರುವುದು ದೊಡ್ಡ ದುರಂತ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ನಡುವೆ ಕೆಸರೆರಚಾಟ ಮಾಡಿಕೊಳ್ಳುತ್ತಾ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿವೆ. ಇದು ಕೇವಲ ಉತ್ತರ ಕರ್ನಾಟಕ ಭಾಗದವರ ಹಕ್ಕು ಮಾತ್ರವಾಗಿರದೆ, ಮಹದಾಯಿ ಯೋಜನೆ ಇಡೀ ರಾಜ್ಯದ ಜನತೆಯ ಹಕ್ಕು. ಆದ್ದರಿಂದ ಸರ್ಕಾರದಿಂದ ಸ್ಪಷ್ಟ ಉತ್ತರ ಬರುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಒಕ್ಕೂಟದ ಮುಖಂಡರು ಎಚ್ಚರಿಸಿದರು.
ಒಕ್ಕೂಟದ ಸಂಚಾಲಕ ಡಾ.ಚಂದ್ರಶೇಖರ ಸಾಂಬ್ರಾಣಿ ಮಾತನಾಡಿ, ಗೋವಾದಲ್ಲಿ ಹರಿಯುವ ಮಹದಾಯಿ ನದಿಯ ನೀರನ್ನು ಅಲ್ಲಿನ ಕೃಷಿಕರು ಬಳಸಿಕೊಳ್ಳದೆ, ನದಿಯ ನೀರು ಅರಬ್ಬಿ ಸಮುದ್ರ ಸೇರಿ ವ್ಯರ್ಥವಾಗುತ್ತಿದೆ. ಅದನ್ನು ನಮಗೆ ನೀಡಿದರೆ ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವಂತಹ ಸಾವಿರಾರು ಕೆರೆಗಳಿಗೆ ನೀರು ತುಂಬಿಸಿಕೊಂಡು, ಕುಡಿಯಲು ಹಾಗೂ ಕೃಷಿ ಚಟುವಟಿಕೆಗೆ ಸಹಾಯವಾಗುತ್ತದೆ. ಆದರೆ, ರಾಜಕೀಯ ಪಕ್ಷಗಳು ಸ್ವಹಿತಾಸಕ್ತಿ, ಸ್ವಾರ್ಥದಿಂದ ಯೋಜನೆ ಇತ್ಯರ್ಥಗೊಳಿಸಲು ಹಿಂದೇಟು ಹಾಕುತ್ತಿವೆ ಎಂದು ದೂರಿದರು.