ಮಾಂಸ ಬೇಡಿಕೆ ಪೂರೈಕೆಗೆ `ಮೀಟ್ ಕಾರ್ಪೋರೇಷನ್'

Published On :
ಬೆಂಗಳೂರು: ರಾಜ್ಯದಲ್ಲಿ ಹೈನುಗಾರಿ3ಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಮಾಂಸ ನಿಗಮ(ಮೀಟ್ ಕಾರ್ಪೋರೇಷನ್) ಸ್ಥಾಪಿಸಲು ತೀರ್ಮಾನಿಸಿದೆ.
ರಾಜ್ಯದಲ್ಲಿ ಮೇಕೆ ಮಾಂಸದ ಬೇಡಿಕೆಗೆ ತಕ್ಕಂತೆ ಪೂರೈಸಲು ಮತ್ತು ಉತ್ತಮ ಗುಣಮಟ್ಟದ ಮೇಕೆ ಮಾಂಸ ಒದಗಿಸಲು ಮಾರುಕಟ್ಟೆಗಳನ್ನು ಸ್ಥಾಪಿಸಬೇಕಿದೆ. ಇದಕ್ಕಾಗಿ `ಮೀಟ್ ಕಾರ್ಪೋರೇಷನ್' ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಪಶುಸಂಗೋಪನಾ ಇಲಾಖೆ ಮತ್ತು ರಾಜ್ಯ ಕುರಿ ಹಾಗೂ ಉಣ್ಣೆ ಅಭಿವೃದ್ಧಿ ನಿಗಮ ಸೋಮವಾರ ನಗರದಲ್ಲಿ ಕುರಿ, ಮೇಕೆ ಆಧರಿಸಿದವರ ಬದುಕಿನ ಬಲವರ್ಧನೆ ಕುರಿತ ಪ್ರಾದೇಶಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೃಷಿಗೆ ಪೂರಕವಾಗಿ ಹೈನುಕಾರಿಕೆ ಉತ್ತೇಜಿಸಬೇಕಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದಿಂದ ನೆರವು ಅಗತ್ಯ. ರಾಜ್ಯ ಕೂಡ ಅನೇಕ ಯೋಜನೆಗಳನ್ನು ರೂಪಿಸಿದ್ದು, ಸದ್ಯದಲ್ಲೇ ಮಾಂಸ ನಿಗಮ ಸ್ಥಾಪಿಸಲಾಗುತ್ತಿದೆ ಎಂದರು. ರಾಜ್ಯದಲ್ಲಿ ಈ ಬಾರಿ ಕೃಷಿ ಸಂಪೂರ್ಣ ವಿಫಲವಾಗಿದ್ದು, ರೈತರು ಆರ್ಥಿಕವಾಗಿ ಸದೃಢವಾಗಲು ಹೈನುಗಾರಿಕೆ ಮಾಡಬೇಕಿದೆ. ಇದಕ್ಕಾಗಿ ಅನೇಕ ಪರ್ಯಾಯ ಉಪಕ್ರಮಗಳನ್ನು ರೈತರಿಗೆ ಸೂಚಿಸುತ್ತಿದೆ. ಹಾಗೆಯೇ ರಾಜ್ಯದಲ್ಲಿ ಸುಮಾರು 10ಲಕ್ಷ ಮಂದಿ ಹೈನುಗಾರಿಕೆ ಅವಲಂಬಿಸಿದ್ದು ಅವರನ್ನು ಸದ್ಯದ ಸಂಕಷ್ಟದಿಂದ ಪಾರು ಮಾಡಬೇಕಿದೆ.
ಹೈನುಗಾರಿಕೆಗೆ ಮೂಲಸೌಕರ್ಯ, ತರಬೇತಿ ಮತ್ತು ವೈಜ್ಞಾನಿಕ ಹೈನುಗಾರಿಕೆ ವಿಧಾನಗಳನ್ನು ಕಲಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬಹುವರ್ಷಗಳಿಂದ ನನೆಗುದಿಗೆ ಬಿದ್ದಿದ್ದ 350 ಪಶುವೈದ್ಯರನ್ನು ನೇಮಿಸಲಾಗಿದೆ. ಸದ್ಯದಲ್ಲೇ ಇನ್ನೂ 300 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅಲ್ಲದೆ, ಮುಂದಿನ 15ದಿನಗಳೊಳಗೆ 300 ಪಶು ಸಹಾಯಕರು, 700 ಸಹಾಯಕರ ನೇಮಕ ಪ್ರಸ್ತಾಪ ಸಿದ್ಧಗೊಳಿಸಲಾಗುತ್ತದೆ ಎಂದರು.
ಬೇಡಿಕೆಗೆ ತಕ್ಕಂತೆ ಉತ್ತಮ ತಳಿಯ ಕುರಿಗಳನ್ನು ಉತ್ಪಾದಿಸಲು ಸರ್ಕಾರ ಮುಂದಾಗಿದ್ದು, ಅವಳಿ ಮರಿಗಳನ್ನು ಹಾಕುವ ರ್ಯಾಮ್ ಕುರಿಗಳ ಉತ್ಪಾದನೆ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ನಾರಿ ಸುವರ್ಣ ಯೋಜನೆ ಆರಂಭಿಸಲಾಗಿದ್ದು, ಇದಕ್ಕೆ ಕೇಂದ್ರದ ನೆರವು ಕೋರಲಾಗಿದೆ. ಪ್ರತಿ ಗ್ರಾಮದಲ್ಲಿ 30 ಕುರಿಗಳಂತೆ ರಾಜ್ಯದ 5000 ಗ್ರಾಮ ಗಳಲ್ಲಿ 1.50 ಕೋಟಿ ರ್ಯಾಮ್ ಕುರಿಗಳನ್ನು ಸಂತಾನ ವೃದ್ಧಿಸಲು ಸಾಧ್ಯವಿದೆ. ಕೇಂದ್ರ ಪಶುಸಂಗೋಪನಾ ಇಲಾಖೆ ಜಂಟಿ ಕಾರ್ಯದರ್ಶಿ ಸಂಜಯ್ ಬೋಸರೆಡ್ಡಿ, ರಾಜ್ಯ ಕುರಿ, ಉಣ್ಣೆ ಅಭಿವೃದ್ಧಿ ನಿಗಮ ಅಧ್ಯಕ್ಷ ಪಂಡಿತ್ ಚಿದ್ರಿ, ರಾಜ್ಯದ ಪಶುಸಂಗೋಪನಾ ಇಲಾಖೆ ನಿರ್ದೇಶಕ ಡಾ. ಸಯ್ಯದ್ ಅಹಮ್ಮದ್, ಡಾ.ಕೆ.ಎಂ.ಮಹಮ್ಮದ್ ಜಫ್ರುಲ್ಲಾ ಖಾನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


