

ಕೋಲಾರ: ಏಕಪಕ್ಷೀಯವಾಗಿ ಸಾಗುವಳಿ ಚೀಟಿ ವಿತರಣೆ, ಸರ್ಕಾರಿ ಗೋಮಾಳ ಜಾಗದ ಮಂಜೂರು ವಿಚಾರದಲ್ಲಿ ಡಿಸಿ ಗಮನಕ್ಕೆ ತರದೆ ಭೂಮಿ ಹಂಚಿಕೆ ಹಾಗೂ ತಮ್ಮ ಕುಟುಂಬದ ಸದಸ್ಯರಿಗೆ ಸರ್ಕಾರಿ ಜಮೀನನ್ನು ನಮೂದಿಸಿರುವ ಆರೋಪದಡಿ ಮುಳಬಾಗಿಲು ತಹಸೀಲ್ದಾರ್ ವೈ.ಜಿ. ಕಾಂತವೀರಯ್ಯ ಅವರನ್ನು ಸೇವೆಯಿಂದಅಮಾನತುಗೊಳಿಸಿ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಎಚ್.ಕೆ. ಶ್ರೀಪಾದರಾವ್ ಆದೇಶ ಹೊರಡಿಸಿದ್ದಾರೆ.
ಮುಳಬಾಗಿಲು ತಾಲೂಕಿನ ಆಳಗನಹಳ್ಳಿ ಗ್ರಾಮದ 4.28 ಎಕರೆ ಜಮೀನಿಗೆ ಮೇಲ್ಮನವಿ ಅನುಸಾರ ಬಾಬಣ್ಣ ಎಂಬುವರು ಬಗರ್ ಹುಕುಂ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರಿಗೆ ಸಾಗುವಳಿ ಚೀಟಿ ನೀಡಲು ವಿಳಂಬ ಮಾಡಿದ್ದರಿಂದ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿ ನ್ಯಾಯ ಕೋರಿದ್ದರು. ವ್ಯಾಜ್ಯ ಇತ್ಯರ್ಥವಾಗುವ ಮುನ್ನವೇ ಅರ್ಜಿದಾರ ಬಾಬಣ್ಣ ಅವರು 23-6-2011ರಲ್ಲಿ ಮೃತಪಟ್ಟಿದ್ದಾರೆ. ಬಾಬಣ್ಣ ಅವರಿಗೆ ಅವರಿಗೆ ಇಬ್ಬರು ಪತ್ನಿಯರಿದ್ದು ತಲಾ 4 ಮಕ್ಕಳಂತೆ ಒಟ್ಟು 8 ಮಕ್ಕಳಿದ್ದಾರೆ.
ಸರ್ಕಾರದ ನಿಯಮ ಪ್ರಕಾರ ಬಾಬಣ್ಣ ಹಾಗೂ ಪತ್ನಿಯರ ಹೆಸರಿನಲ್ಲಿ ಜಂಟಿ ಖಾತೆ ನಮೂದಿಸಬೇಕಾಗಿತ್ತು. ಆದರೆ, ಸಾಗುವಳಿ ಚೀಟಿ ವಿತರಣೆಗೆ ಸಂಬಂಧಿಸಿದಂತೆ ಬಾಬಣ್ಣ ಕುಟುಂಬದ ಸದಸ್ಯರ ಅಭಿಪ್ರಾಯ ಕೇಳದೆ ತಹಸೀಲ್ದಾರ್ ಏಕಪಕ್ಷೀಯವಾಗಿ ಅರ್ಜಿದಾರರ ಮಗನಿಗೆ ಸಾಗುವಳಿ ಆದೇಶ ಪತ್ರ ನೀಡುವ ಮೂಲಕ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ. ಇದರಿಂದ ತಹಸೀಲ್ದಾರ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು. ಮುಳಬಾಗಿಲು ತಹಸೀಲ್ದಾರ್ ಕಾಂತವೀರಯ್ಯ ವಿರುದ್ಧ ಗಂಭೀರ ಆರೋಪದ ಹಿನ್ನೆಲೆಯಲ್ಲಿ ತನಿಖಾ ತಂಡವನ್ನು ರಚಿಸಿ ವರದಿ ಕೇಳಲಾಗಿತ್ತು. ಅಧಿಕಾರಿಗಳು ವಿಚಾರಣೆ ನಡೆಸಿದಾಗ ಬಾಬಣ್ಣ ಪ್ರಕರಣವಲ್ಲದೆ ದರಖಾಸ್ತು ಅರ್ಜಿ ಫಾರಂ 53 ಸ್ವೀಕೃತಿ ವಹಿಯಲ್ಲಿ ಸುಮಾರು 127 ಹೆಸರುಗಳನ್ನು ಅಕ್ರಮವಾಗಿ ಬೇರೆ ಬರವಣಿಗೆಯ ಮೂಲಕ ನಮೂದಿಸಿರುವುದು ಕಂಡು ಬಂದಿದೆ.