

ಬೆಂಗಳೂರು: ಅಪ್ರಾಪ್ತೆಯೊಂದಿಗೆ ಪರಾರಿಯಾಗಿದ್ದಲ್ಲದೆ, ಆಕೆಯನ್ನು ಅತ್ಯಾಚಾರ ಮಾಡಿದ ಆರೋಪಿಯನ್ನು ಮೈಸೂರಿನಲ್ಲಿ ಬಂಧಿಸಿರುವ ಕಾಡುಗೋಡಿ ಪೊಲೀಸರು, ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರಾಯಚೂರು ಮೂಲದ ಮುತ್ತುರಾಜ್ (22) ಬಂಧಿತ. ಕಾಡುಗೋಡಿಯಲ್ಲಿ ವಾಸವಿದ್ದ ಈತ ಡಿ.2ರಂದು ಪಕ್ಕದ ಮನೆಯ ಸುಮಾರು 17 ವರ್ಷದ ಬಾಲಕಿಯನ್ನು ಪುಸಲಾಯಿಸಿ ಮೈಸೂರಿಗೆ ಕರೆದುಕೊಂಡು ಹೋಗಿದ್ದ. ಮನೆಯಲ್ಲಿ ಬಾಲಕಿ ಇಲ್ಲದ್ದನ್ನು ಕಂಡ ಪೋಷಕರು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಶೋಭ ಹ್ಯಾಬಿಟೆಕ್ ಎಂಬ ಲೇಬರ್ ಕಾಂಟ್ರಾಕ್ಟಿಂಗ್ ಕಂಪನಿಯಲ್ಲಿ ಲೇಬರ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಮುತ್ತುರಾಜ್ ಬಾಲಕಿಯ ಅಣ್ಣನೊಂದಿಗೆ ಸ್ನೇಹ ಬೆಳೆಸಿಕೊಂಡು ಮನೆಯ ಇತರೆ ಸದಸ್ಯರಿಗೆ ಪರಿಚಿತನಾಗಿದ್ದ. ಪರಿಚಯದ ಮೇಲೆ ಆಗಾಗ ಮನೆಗೆ ಹೋಗುತ್ತಿದ್ದ. ಈ ವೇಳೆ ಬಾಲಕಿಯೊಂದಿಗೆ ಪ್ರೀತಿಯ ನಾಟಕವಾಡಿ ಡಿ.2ರಂದು ಯಾರಿಗೂ ಗೊತ್ತಾಗದಂತೆ ಮನೆಯಿಂದ ಕರೆದುಕೊಂಡು ಮೈಸೂರಿಗೆ ತೆರಳಿದ್ದ.
ಲಾಡ್ಜ್ ನಲ್ಲಿ ಅತ್ಯಾಚಾರ: ಅಂದು ಮೈಸೂರು ನಗರ ಬಸ್ ನಿಲ್ದಾಣದ ಸಮೀಪದ ಲಾಡ್ಜ್ ನಲ್ಲಿ ರೂಂ ಪಡೆದು ತಂಗಿದ್ದು, ರಾತ್ರಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇದರಿಂದ ಬಾಲಕಿಗೆ ರಕ್ತಸ್ರಾವ ಆರಂಭವಾಗಿದೆ. ಈ ವೇಳೆ ಗಾಬರಿಗೊಂಡ ಮುತ್ತುರಾಜ್, ನಸುಕಿನ 2.30ರಲ್ಲಿ ಆಕೆಯನ್ನು ಸಮೀಪದ ಚಲುವಾಂಬ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಪರೀಕ್ಷಿಸಿದ ವೈದ್ಯರಿಗೆ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ಖಚಿತವಾಗಿದೆ. ಮುತ್ತುರಾಜ್ ಮೇಲೆ ಅನುಮಾನಗೊಂಡ ವೈದ್ಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಧಾವಿಸಿದ ಲಷ್ಕರ್ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೂಡಲೇ ಮೈಸೂರಿಗೆ ತೆರಳಿದ್ದ ಕಾಡುಗೋಡಿ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ವಿರುದ್ಧ ಅಪಹರಣ ಹಾಗೂ ಫೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.