

ಬೆಂಗಳೂರು: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ, ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಕರ್ನಾಟಕ ಕಾವಲು ಸೇನೆ ಸಂಘಟನೆಯ 6 ಮಂದಿ ಕಾರ್ಯಕರ್ತರು ಸೇರಿದಂತೆ 7 ಮಂದಿ ಆರೋಪಿಗಳನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಕನಕಪುರ ರಸ್ತೆ ನಿವಾಸಿ ರುದ್ರಜೀತ್, ಜೆಪಿ ನಗರದ ರವಿಚಂದ್ರ, ಚಿಕ್ಕಕಮ್ಮನಹಳ್ಳಿಯ ಸತೀಶ್ ಹಾಗೂ ಬನ್ನೇರುಘಟ್ಟ ನಿವಾಸಿಗಳಾದ ಪ್ರತಾಪ್, ಜಿತೇಂದ್ರ ಮತ್ತು ಮುನಿಯಪ್ಪ ಬಂಧಿತರು. ಎಲ್ಲರೂ ಕರ್ನಾಟಕ ಕಾವಲು ಸೇನೆ ಸಂಘಟನೆಯ ಸದಸ್ಯರೆಂದು ಹೇಳಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ನಗರದ ಬೇರೆ ಕಡೆ ನಡೆಯುವ ವೇಶ್ಯವಾಟಿಕೆ ಅಡ್ಡೆಗಳ ಬಗ್ಗೆ ಆರೋಪಿಗಳು ಮಾಹಿತಿ ಸಂಗ್ರಹಿಸುತ್ತಿದ್ದರು. ಬಳಿಕ ಅಂತಹ ಸ್ಥಳಗಳಿಗೆ ತೆರಳಿ ತಾವು ಕರ್ನಾಟಕ ಕಾವಲು ಸೇನೆ ಸಂಘಟನೆಯವರು ಹಾಗೂ ಬೇರೆ ಬೇರೆ ಸುದ್ದಿ ಚಾನೆಲ್ ಗಳ ಕಡೆಯವರು ಎಂದು ಹೇಳಿಕೊಂಡು ಅಡ್ಡೆ ನಡೆಸುತ್ತಿದ್ದವರಿಂದ ಹಾಗೂ ಅಲ್ಲಿದ್ದ ಗ್ರಾಹಕರಿಂದ ಹಣ ಸುಲಿಗೆ ಮಾಡುತ್ತಿದ್ದರು. ಒಂದು ವೇಳೆ ಯಾರಾದರೂ ಹಣ ನೀಡಲು ನಿರಾಕರಿಸಿದರೆ ಅಡ್ಡೆ ಬಗ್ಗೆ ವಿಡಿಯೋ ಮಾಡಿ ಟಿವಿ ಚಾನೆಲ್ ಗಳಿಗೆ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಅಲ್ಲದೇ ಆರೋಪಿಗಳು ಹೊಂದಿರುವ ಕಾರಿನ ಮೇಲೆ ಪ್ರೆಸ್ ಎಂದು ಬರೆದುಕೊಂಡಿದ್ದರು. ಆದರೆ, ಇವರ್ಯಾರೂ ಪತ್ರಕರ್ತರು ಅಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರ ರಾತ್ರಿ ತಾವರೆಕೆರೆ ಶ್ರೀರಾಮ ಲೇ ಔಟ್ ನ ಮನೆಯೊಂದಕ್ಕೆ ತೆರಳಿದ ಆರೋಪಿಗಳು ಹಣ ಸುಲಿಗೆಗೆ ಯತ್ನಿಸಿದ್ದರು. ಆದರೆ, ಅಲ್ಲಿದ್ದ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿದ ಮೈಕೋ ಲೇಔಟ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಕೋಲ್ಕತಾ ಮೂಲದ ಇಬ್ಬರು ಹಾಗೂ ಚೆನ್ನೈ ಮೂಲದ ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ. ಇದೇ ವೇಳೆ ಅಡ್ಡೆಯ ಮಧ್ಯವರ್ತಿಯಾಗಿದ್ದ ಹರೀಶ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ವಾರದ ಹಿಂದಷ್ಟೇ ಇದೇ ಆರೋಪಿಗಳು ಜೆ.ಪಿ.ನಗರದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿ ರು.1.2 ಲಕ್ಷ ಸುಲಿಗೆ ಮಾಡಿದ್ದರು. ಈ ಬಗ್ಗೆ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರ ವಿಚಾರಣೆ ವೇಳೆ ಇದೇ ರೀತಿ ಹಲವು ಕಡೆ ಸುಲಿಗೆ ಮಾಡಿರುವ ಅನುಮಾನವಿದೆ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.