

ಬೆಂಗಳೂರು: ಚಲಿಸುತ್ತಿದ್ದ ಬೈಕ್‍ನಿಂದ ಬಿದ್ದು ಹಿಂಬದಿ ಸವಾರರೊಬ್ಬರು ಮೃತಪಟ್ಟಿರುವ ಘಟನೆ ಹುಳಿಮಾವು ಸಮೀಪದ ವಿಜಯಾ ಬ್ಯಾಂಕ್ ಕಾಲೋನಿಯಲ್ಲಿ ಶನಿವಾರ ನಸುಕಿನಲ್ಲಿ
ಸಂಭವಿಸಿದೆ.
ಬೇಗೂರು ಸಮೀಪದ ಚಾಮುಂಡೇಶ್ವರಿ ನಗರ ನಿವಾಸಿ ಸಂತೋಷ (30) ಮೃತ ದುರ್ದೈವಿ. ರಸ್ತೆಯ ಗುಂಡಿಗೆ ಬೈಕ್ ಇಳಿದಾಗ ಬೈಕ್‍ನಿಂದ ಬಿದ್ದು ಮೃತಪಟ್ಟಿದ್ದಾರೆ. ಘಟನೆಗೆ ಗುಂಡಿ ಬಿದ್ದ ರಸ್ತೆಯೇ ಕಾರಣ ಎಂದು ಸ್ಥಳೀಯ ಆರೋಪಿಸಿದ್ದಾರೆ. ಗದಗ ಮೂಲದ ಸಂತೋಷ ಅಗ್ನಿಶಾಮಕ ಸಾಧನಗಳಲ್ಲಿ ಗ್ಯಾಸ್ ತುಂಬುವ ವ್ಯವಹಾರದಲ್ಲಿ ತೊಡಗಿದ್ದರು. ಕೆಲ ದಿನಗಳಿಂದ ಚಾಮುಂಡೇಶ್ವರಿ ನಗರದಲ್ಲಿ ವಾಸವಿರುವ ತನ್ನ ಸ್ನೇಹಿತನ ಜತೆ ನೆಲೆಸಿದ್ದರು.
ಸಂತೋಷ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರು. ಶನಿವಾರ ನಸುಕಿನಲ್ಲಿ ನೋವು ಸಹಿಸಲು ಅಸಾಧ್ಯವಾಗಿತ್ತು. ಹೀಗಾಗಿ, ಅದೇ ಪ್ರದೇಶದಲ್ಲಿ ವಾಸವಿರುವ ಸ್ನೇಹಿತ ದೇವೇಂದ್ರನಿಗೆ ತಿಳಿಸಿ ಆಸ್ಪತ್ರೆಗೆ ಕರೆದೊಯ್ಯುವಂತೆ ಕೋರಿದ್ದರು. ಅದರಂತೆ ದೇವೇಂದ್ರ, ಬೈಕ್‍ನಲ್ಲಿ ಸಂತೋಷನನ್ನು ಕೂರಿಸಿಕೊಂಡು ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ವಿಜಯಾ ಬ್ಯಾಂಕ್ ಕಾಲೋನಿ ಬಿಗ್ ಬಜಾರ್ ಸಮೀಪ ಹೋಗುವಾಗ ಬೆನ್ನು ನೋವು ಇನ್ನಷ್ಟು ಹೆಚ್ಚಾಗಿದ್ದು ಕುಳಿತುಕೊಳ್ಳಲು ಆಗುತ್ತಿಲ್ಲ ವಾಹನ ನಿಲ್ಲಿಸುವಂತೆ ಸಂತೋಷ್, ದೇವೇಂದ್ರನಿಗೆ ಹೇಳಿದ್ದಾರೆ. ವಾಹನವನ್ನು ಇನ್ನೇನು ನಿಲ್ಲಿಸಬೇಕು ಎನ್ನುವಷ್ಟರಲ್ಲಿ ಹಿಂದೆ ಕುಳಿತಿದ್ದ ಸಂತೋಷ ಕೆಳಗೆ ಬಿದ್ದಾಗ ತಲೆಗೆ ಪೆಟ್ಟಾಗಿತ್ತು. ತೀವ್ರ ರಕ್ತಸ್ರಾವವಾಗುತ್ತಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು.
ಸಂತೋಷ ಸಾವಿಗೆ ರಸ್ತೆ ಗುಂಡಿ ಕಾರಣವಾಗಿದ್ದು ರಸ್ತೆ ತುಂಬೆಲ್ಲಾ ಗುಂಡಿಗಳು ತುಂಬಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಆದರೆ, ಸಂತೋಷ ಆಪ್ತ ಸ್ನೇಹಿತನ ಪ್ರಕಾರ, ತೀವ್ರ ಬೆನ್ನು ನೋವು ತಾಳದೆ ಬೈಕ್‍ನಲ್ಲಿ ಕುಳಿತುಕೊಳ್ಳಲು ಆಗದೆ ಸಂತೋಷ ಕೆಳಗೆ ಬಿದ್ದಿದ್ದಾರೆ ಎಂದು ಹೇಳಿದ್ದಾರೆ. ರಸ್ತೆಯಲ್ಲಿ ಕೆಲ ಗುಂಡಿಗಳಿವೆ. ಆದರೆ, ಗುಂಡಿಗಳಿಂದಲೇ ದುರಂತ ಸಂಭವಿಸಿದೆ ಎಂದು ಹೇಳಲಾಗದು.
ವಾಹನ ಚಲಾಯಿಸುತ್ತಿದ್ದವರ ಹೇಳಿಕೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ಆದರೆ, ಅವರು ಈಗ ಮಾತನಾಡುವ ಸ್ಥಿತಿಯಲ್ಲಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ರಸ್ತೆ ಗುಂಡಿಗೆ ವಾಹನ ಇಳಿದ ಕಾರಣವೇ ಸಂತೋಷ ಕೆಳಗೆ ಬಿದ್ದು ಮೃತಪಟ್ಟರೇ? ಅಥವಾ ನೋವು ತಾಳಲಾರದೆ ಜಿಗಿದ ಪರಿಣಾಮ ಕೆಳಗೆ ಬಿದ್ದರಾ ಎನ್ನುವುದು ಖಚಿತಪಡಿಸಿಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಹುಳಿಮಾವು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.