ಕೆಪಿಎಸ್ ಸಿ ಪರೀಕ್ಷೆ ಅಕ್ರಮ: ಸರ್ಕಾರಕ್ಕೆ ನೊಟೀಸ್

ಕೆಪಿಎಸ್‍ಸಿ ನಡೆಸಿದ್ದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪವಿದ್ದು ಮರು ಪರೀಕ್ಷೆಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿ ಆದೇಶಿಸಿದೆ.

ಬೆಂಗಳೂರು: ಪ್ರಥಮ ದರ್ಜೆ(ಎಫ್ ಡಿಎ) ಮತ್ತು ದ್ವಿತಿಯ ದರ್ಜೆ(ಎಸ್‍ಡಿಎ) ಹುದ್ದೆಳಿಗೆ ನಡೆದ ಪರೀಕ್ಷೆಯಲ್ಲಿ  ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿ ಆದೇಶಿಸಿದೆ. ಅಲ್ಲದೆ, ಈ ಸಂಬಂಧ ನಡೆಯುವ ನೇಮಕಾತಿಗಳು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತವೆ ಎಂದು ತಿಳಿಸಿದೆ.
ಲಕ್ಷ್ಮಿನರಸಿಂಹಯ್ಯ, ಚಂದ್ರಯ್ಯ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಮತ್ತು
ನ್ಯಾ. ಬಿ.ಮನೋಹರ್ ಅವರಿದ್ದ ನ್ಯಾಯಪೀಠ, ಸರ್ಕಾರ ಮತ್ತು ಕೆಪಿಎಸ್‍ಸಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ಆಹಾರ ಇಲಾಖೆ ಸೇರಿದಂತೆ ರಾಜ್ಯ ಸರಕಾರದ ವಿವಿಧ ಇಲಾಖೆಗಳಿಗೆ ಎನ್ ಡಿಎ ಮತ್ತು ಎಸ್‍ಡಿಎ ಹುದ್ದೆಗಳಿಗೆ ಕೆಪಿಎಸ್‍ಸಿ ಅಕ್ಟೋಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಸಿತ್ತು. ಅಕ್ಟೋಬರ್ 4ರಂದು ನಡೆದ ಸಾಮಾನ್ಯ ಜ್ಞಾನ ಪರೀಕ್ಷೆಗೆ ಅಕ್ಟೋಬರ್ 3ರಂದು ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳ ಪಟ್ಟಿ ಸೋರಿಕೆಯಾಗಿ, ವಾಟ್ಸಾಪ್‍ನಲ್ಲಿ ಹರಿದಾಡಿದ್ದವು ಎಂಬ ಆರೋಪವಿತ್ತು. ಅಲ್ಲದೆ, ತುಮಕೂರಿನಲ್ಲಿ ಪ್ರಶ್ನೆ ಪತ್ರಿಕೆ ಮಾರಾಟ ಮಾಡುತ್ತಿದ್ದ ಆರೋಪದಡಿ ಒಬ್ಬನನ್ನು ಬಂಧಿಸಲಾಗಿತ್ತು. ಈ ಸಂಬಂಧ ಹಲವು ಜನ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿ ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಆದರೂ, ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಹಾಗಾಗಿ ಮರು ಪರೀಕ್ಷೆ ನಡೆಸುವುದಕ್ಕೆ ಕೆಪಿಎಸ್‍ಸಿ ಮತ್ತು ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com