ಖಾಲಿ ಸೈಟುಗಳಲ್ಲಿ ತ್ಯಾಜ್ಯ; ಲಾರಿ ವಶ

ನಗರದ ಹಲವೆಡೆ ಖಾಲಿ ನಿವೇಶನಗಳಲ್ಲಿ ರಾತ್ರೋರಾತ್ರಿ ಕಸ ಸುರಿದು ಪರಾರಿಯಾಗುತ್ತಿದ್ದ ಲಾರಿಗಳನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ನಗರದ ಹಲವೆಡೆ ಖಾಲಿ ನಿವೇಶನಗಳಲ್ಲಿ ರಾತ್ರೋರಾತ್ರಿ ಕಸ ಸುರಿದು ಪರಾರಿಯಾಗುತ್ತಿದ್ದ ಲಾರಿಗಳನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹಸಿ ಕಸ ಮತ್ತು ಒಣ ಕಸವನ್ನು ಮನೆಯಲ್ಲಿಯೇ ವಿಂಗಡಿಸಿ ಕೊಟ್ಟರೆ ವಿಲೇವಾರಿ ಸುಲಭ. ಆದರೆ, ಜನರು ಕಸವನ್ನು ವಿಂಗಡಿಸಿ ಕೊಡುವ ಪರಿಪಾಠವನ್ನೇ ಬೆಳೆಸಿಕೊಂಡಿಲ್ಲ. ಹೀಗಾಗಿ ತ್ಯಾಜ್ಯ ಘಟಕಗಳಿಗೆ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ತ್ಯಾಜ್ಯ ಸಂಸ್ಕರಣಾ ಘಟಕಗಳು ಗುತ್ತಿಗೆದಾರರಿಂದ ತ್ಯಾಜ್ಯವನ್ನು ಪಡೆಯದೆ ಲಾರಿಗಳನ್ನು ಹಿಂದೆ ಕಳುಹಿಸುತ್ತಿದ್ದಾರೆ. ಆದರೆ, ಗುತ್ತಿಗೆದಾರರು ನಗರದ ಹಲವೆಡೆ ಖಾಲಿ ನಿವೇಶನಗಳಲ್ಲಿ ರಾತ್ರೋರಾತ್ರಿ ಸುರಿದು ಪರಾರಿಯಾಗುತ್ತಿದ್ದರು.

ಹೀಗೆ ಅನಧಿಕೃತವಾಗಿ ಕಸವಿಲೇವಾರಿ ಮಾಡುತ್ತಿದ್ದ ಗಂಗಮ್ಮ ದೇವಿ ಟ್ರಾನ್ಸ್ ಪೋರ್ಟ್ ಗೆ ಸೇರಿದ ಲಾರಿಗಳಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ ಎಂದು ವಲಯ ಜಂಟಿ ಆಯುಕ್ತ ವೀರಭದ್ರಪ್ಪ ತಿಳಿಸಿದ್ದಾರೆ.

ಕನ್ನಹಳ್ಳಿ ಸೀಗೆಹಳ್ಳಿ ಮತ್ತು ದೊಡ್ಡ ಬಿದರಕಲ್ಲು ಕಸ ಸಂಸ್ಕರಣ ಘಟಕಗಳಲ್ಲಿ ವಿಂಗಡಿಸಿದ ಕಸವನ್ನು ಮಾತ್ರ ತೆಗೆದುಕೊಳ್ಳಲು ಕಡ್ಡಾಯಗೊಳಿಸಲಾಗಿತ್ತು. ಇದರಿಂದ ಕಸವನ್ನು ವಿಂಗಡಿಸಿ, ವಿಲೇವಾರಿ ಮಾಡುವುದು ಗುತ್ತಿಗೆದಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಗುತ್ತಿಗೆದಾರರು ಈ ಸಮಸ್ಯೆಯಿಂದಪಾರಾಗಲು ರಾತ್ರಿ ವೇಳೆ ನಗರದ ಹೊರ ವಲಯದ ಖಾಲಿ ನಿವೇಶನ, ದೊಡ್ಡ ಮೋರಿಗಳು ಹಾಗೂ ರಸ್ತೆ ಬದಿಗಳಲ್ಲಿ ಮಿಶ್ರ ಕಸವನ್ನು ಸುರಿಯುತ್ತಿದ್ದರು. ಇದರಿಂದ ಸಮೀಪದ ನಿವಾಸಿಗಳು ಕಸದ ದುರ್ವಾಸನೆಯಿಂದ ನಿತ್ಯ ನರಕ ಅನುಭವಿಸಬೇಕಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಯುಕ್ತರು, ಅನಧಿಕೃತವಾಗಿ ಕಸ ಸುರಿಯುತ್ತಿದ್ದ ವಾಹನಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು. ಜೊತೆಗೆ, ಪೊಲೀಸರು ನೆರವಿನೊಂದಿಗೆ ಪಾಲಿಕೆ ಅಧಿಕಾರಿಗಳು ರಾತ್ರಿ ವೇಳೆ ಗಸ್ತು ತಿರುಗಿ ಅನಧಿಕೃತವಾಗಿ ಕಸ ಸುರಿಯುವುದನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು. ಆದರೂ, ಗುತ್ತಿಗೆದಾರರು ಅಧಿಕಾರಿಗಳ ಕಣ್ಣು ತಪ್ಪಿಸಲು ಅನಧಿಕೃತವಾಗಿ ಸುರಿಯುತ್ತಿದ್ದರು.

ಕೊನೆಗೂ ಅಧಿಕಾರಿಗಳ ಪ್ರಯತ್ನದಿಂದ ಅನಧಿಕೃತವಾಗಿ ಕಸ ಸುರಿಯುತ್ತಿದ್ದ ಗಂಗ್ಮ್ಮ ದೇವಿ ಟ್ರಾನ್ಸ್ ಪೋರ್ಟ್ ಗೆ ಸೇರಿದ 3 ಲಾರಿಗಳು (ಕೆಎ-28 ಬಿ-3237, ಕೆಎ-04 ಬಿ-9879 ಮತ್ತು ಕೆಎ-08 ಬಿ - 3435) ಹಿಡಿದು ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಲಾರಿಗಳು ಮೈಸೂರು ರಸ್ತೆ, ನಾಯಂಡಹಳ್ಳಿ, ಕನಕಪುರ ರಸ್ತೆ ಸೇರಿದಂತೆ ಹಲವೆಡೆ ನಿರಂತರವಾಗಿ ಕಸ ಸುರಿಯುತ್ತಿದ್ದವು. ಅನಧಿಕೃತವಾಗಿ ಕಸ ಸುರಿಯುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಜರುಗಿಸುವಂತೆ ಪಾಲಿಕೆ ಆಯುಕ್ತರು ಸೂಚಿಸಿದ್ದಾರೆ. ಸಾರ್ವಜನಿಕರು ಸಹ ರಸ್ತೆ ಬದಿ ಕಸ ಸುರಿಯುವ ಲಾರಿಗಳ ಮಾಹಿತಿಯನ್ನು ಸಮೀಪದ ಪೊಲೀಸ್ ಠಾಣೆಗೆ ನೀಡುವಂತೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com