

ಬೆಂಗಳೂರು: ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಗಳಿಗೆ ಭಾನುವಾರ ಕ್ರಮ ಸಂಖ್ಯೆಗಳು ಸಿಕ್ಕಿದ್ದು, ಇದರಿಂದ ಪ್ರಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದಂತಾಗಿದೆ.
ಎಂಟು ಮಂದಿ ಮಹಿಳಾ ಅಭ್ಯರ್ಥಿಗಳೂ ಸೇರಿದಂತೆ ಒಟ್ಟು 125 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಇವರೆಲ್ಲಾ ಸೋಮವಾರದಿಂದ ಅಧಿಕೃತವಾಗಿ ಪ್ರಚಾರ ಆರಂಭಿಸಲಿದ್ದಾರೆ. ಇವರೊಂದಿಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಬುಧವಾರದಿಂದ ಜಿಲ್ಲಾ ಪ್ರವಾಸಗಳನ್ನು ಕೈಗೊಳ್ಳಲಿದ್ದಾರೆ.
ಪಕ್ಷಗಳ ಅಭ್ಯರ್ಥಿಗಳು ವಾರದ ಹಿಂದೆಯೇ ಪ್ರಚಾರ ಶುರು ಮಾಡಿದ್ದು, ಬಹುತೇಕ ಎಲ್ಲಾ ತಾಲೂಕುಗಳನ್ನು ಒಂದು ಸುತ್ತು ಹಾಕಿದ್ದಾರೆ. ಸಾಧ್ಯವಾದಷ್ಟು ಮತದಾರರನ್ನು ದೂರವಾಣಿ, ಎಸ್‍ಎಂಎಸ್ ಮತ್ತು ವಾಟ್ಸ್ ಆಪ್‍ಗಳ ಮೂಲಕ ಮುಟ್ಟಲು ಯತ್ನಿಸಿದ್ದಾರೆ. ಆದರೆ ಚುನಾವಣಾ ಆಯೋಗದಿಂದ ಸ್ಪರ್ಧಿಸುವ ಅಭ್ಯರ್ಥಿಯ ಕ್ರಮಸಂಖ್ಯೆ ನೀಡದ ಕಾರಣ ಅಭ್ಯರ್ಥಿಗಳು ತಮ್ಮ ಕ್ರಮಸಂಖ್ಯೆಯೊಂದಿಗೆ ಪ್ರಚಾರ ಮಾಡಲು ಆಗಿರಲಿಲ್ಲ. ಆಯೋಗದ ಅಧಿಕಾರಿಗಳು ಭಾನುವಾರ ಕಣದಲ್ಲಿರುವ ಅಭ್ಯರ್ಥಿಗಳನ್ನು ಅಧಿಕೃತವಾಗಿ ದೃಢಪಡಿಸಿ ಅವರಿಗೆ ಕ್ರಮಸಂಖ್ಯೆಗಳನ್ನು ನೀಡಿದ್ದಾರೆ. ಇದನ್ನಾಧರಿಸಿ ಅಭ್ಯರ್ಥಿಗಳು ಕರಪತ್ರಗಳು ಮತ್ತು ಪೋಸ್ಟರ್ ಮತ್ತು ಬ್ಯಾನರ್‍ಗಳನ್ನು ಸಿದ್ಧಪಡಿಸಿಕೊಂಡು ಪ್ರಚಾರ ಆರಂಭಿಸಲಿದ್ದಾರೆ. ಹೀಗಾಗಿ ಸೋಮವಾರ ಮತ್ತು ಮಂಗಳವಾರದ ನಂತರ ಪ್ರಚಾರ ಕಾರ್ಯ ಇನ್ನಷ್ಟು ಬಿರುಸುಗೊಳ್ಳಲಿದೆ.
ಶಾಸಕರೇ ಮುಖ್ಯ: ಕ್ಷೇತ್ರಗಳಲ್ಲಿ ಸರ್ಕಾರದ ಅನುದಾನ ಹಂಚಿಕೆ ಮತ್ತು ಫಲಾನುಭವಿಗಳ ಆಯ್ಕೆ ಮತ್ತು ಇತರ ಪ್ರಮುಖ ವಿಚಾರಗಳಲ್ಲಿ ಶಾಸಕರೇ ಹೆಚ್ಚು ಮಹತ್ವದ ಪಾತ್ರ ವಹಿಸುವುದರಿಂದ ಅಭ್ಯರ್ಥಿಗಳು ಆದಷ್ಟು ತಮ್ಮ ಪಕ್ಷದ ಶಾಸಕರನ್ನೇ ಅವಲಂಬಿಸಿ ಪ್ರಚಾರ ಆರಂಭಿಸುತ್ತಿದ್ದಾರೆ. ಶಾಸಕರೊಂದಿಗೆ ಹೊಟೇಲ್, ದೇವಸ್ಥಾನ ಮತ್ತು ಕೆಲವು ಖಾಸಗಿ ಜಾಗಗಳಲ್ಲಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳನ್ನು ಸೇರಿಸಿ ಸಭೆ ನಡೆಸುತ್ತಿದ್ದಾರೆ. ಇಂಥ ಕಾರ್ಯಕ್ರಮಗಳು ಮಂಗಳವಾರದಿಂದ ಬ್ಲಾಕ್ ಮಟ್ಟದಲ್ಲಿ ಆರಂಭವಾಗಲಿವೆ.
ಈ ಹಂತ ಮುಗಿಯುತ್ತಿದ್ದಂತೆ ತಾಲೂಕು, ಜಿಲ್ಲಾ ನಾಯಕರ ನೇತೃತ್ವದಲ್ಲಿಯೂ ಅಲ್ಲಿಲ್ಲಿ ಸಭೆ ನಡೆಸಲು ಅಭ್ಯರ್ಥಿಗಳು ಪ್ರವಾಸ ಕೈಗೊಳ್ಳಲಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ತಾಲೂಕು, ಹೋಬಳಿ ಮಟ್ಟದ ಮತದಾರರೇ ಅಭ್ಯರ್ಥಿಗಳ ಮನೆಗಳಿಗೆ ಬಂದು ಮಾತುಕತೆ ನಡೆಸಿ ಹೋಗುತ್ತಿದ್ದಾರೆ. ಹಿಂದೆಲ್ಲಾ ಒಂದು ಹಂತಕ್ಕೆ ಬರುತ್ತಿದ್ದಂತೆ ನಾಯಕರ ಪ್ರವಾಸ ಮತ್ತು ಪ್ರಚಾರ ಆರಂಭವಾಗಲಿದೆ.