

ಬೆಂಗಳೂರು: ವಿಧಾನ ಪರಿಷತ್ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸಲು ನಗರ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ವಿ.ಶಂಕರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಚುನಾವಣಾ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಸಭೆಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಗೆ ಜಿಲ್ಲೆಯಲ್ಲಿ 2762 ಮತದಾರರಿದ್ದು, ಒಟ್ಟು 100 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. 440 ಮತಗಟ್ಟೆ ಸಿಬ್ಬಂದಿ ಹಾಗೂ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗುವುದು. ಪ್ರತಿ ತಾಲ್ಲೂಕಿನಲ್ಲಿ ನೀತಿ ಸಂಹಿತೆ ಪಾಲನೆಗೆ ತಹಸೀಲ್ದಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಜನ ಪ್ರತಿನಿಧಿಗಳು ಸರ್ಕಾರಿ ವಾಹನಗಳನ್ನು ಪ್ರಚಾರಕ್ಕೆ ಬಳಸುವುದು ನಿಷೇಧಿಸಲಾಗಿದೆ. ಮತಗಟ್ಟೆ ಸಿಬ್ಬಂದಿಗೆ ಡಿ.17 ಹಾಗೂ 23 ರಂದು ತರಬೇತಿ ನೀಡಲಾಗುವುದು. ಡಿ.27ರ ಬೆಳಗ್ಗೆ 8 ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಮತ ಎಣಿಕೆಯು ಡಿ.30 ರಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಬೆಳಗ್ಗೆ 8ಕ್ಕೆ ನಡೆಯಲಿದೆ ಎಂದು ವಿವರಿಸಿದರು.
ನೀತಿ ಸಂತೆ ಉಲ್ಲಂಘನೆ ಸೇರಿದಂತೆ ಚುನಾವಣೆ ಸಂಬಂಧ ದೂರುಗಳನ್ನು ಸ್ವೀಕರಿಸಲು ಜಿಲ್ಲಾಧಿಕಾರಿಗಳ ಕಛೇರಿ, ಬಿಬಿಎಂಪಿ ಹಾಗೂ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ನಿಯಂತ್ರಣಾ ಕೊಠಡಿ ಸ್ಥಾಪಿಸಲಾಗಿದೆ. ಮುದ್ರಣಾಲಯದವರು ಪ್ರಚಾರದ ಕುರಿತ ಮುದ್ರಣಗಳನ್ನು ಕೈಗೊಳ್ಳುವ ಮುನ್ನ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಘೋಷಣೆ ಮತ್ತು ಪ್ರಮಾಣಪತ್ರ ಸಲ್ಲಿಸಬೇಕು. ಚುನಾವಣೆ ಪ್ರಚಾರ ಮತ್ತು ಇತರೆ ಮುದ್ರಣದಲ್ಲಿ ಮುದ್ರಕರ ಮತ್ತು ಪ್ರಾಯೋಜಕರ ಹೆಸರು, ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಸೂಚಿಸಿದ್ದಾರೆ.
ಚುನಾವಣಾವೀಕ್ಷಕರ ನೇಮಕ
ವಿಧಾನ ಪರಿಷತ್ ಚುನಾವಣೆಯ ಬೆಂಗಳೂರು ನಗರ ಸ್ಥಳೀಯ ಸಂಸ್ಥೆ ಕ್ಷೇತ್ರದ ಚುನಾವಣಾ ವೀಕ್ಷಕರನ್ನಾಗಿ ಪೌರಾಡಳಿತ ಇಲಾಖೆ ನಿರ್ದೇಶಕರಾದ ಡಾ. ಎನ್. ಮಂಜುಳ ಅವರನ್ನು ನೇಮಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಸಂಬಂಧ ದೂರುಗಳನ್ನು ಮಂಜುಳಾ ಅವರ ಮೊ.ಸಂ. 9448544274 ಗೆ ನೀಡಬಹುದು.