

ಬೆಂಗಳೂರು: ಪೊಲೀಸ್ ಅಧಿಕಾರಿ ಸೋಗಿನಲ್ಲಿ ಆಭರಣದ ಅಂಗಡಿಗೆ ತೆರಳಿ ಚಿನ್ನದ ಸರ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಜೆ.ಪಿ.ನಗರ ಪೊಲೀಸರು ರು.40 ಸಾವಿರ ಮೌಲ್ಯದ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ.
ದೇವಸಂದ್ರ ಮುಖ್ಯರಸ್ತೆಯ ನಿವಾಸಿ ಕಿಶೋರ್ ಕುಮಾರ್ (24) ಮತ್ತು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಬೀರಶೆಟ್ಟರಹಳ್ಳಿಯ ಕವಿತಾ (22) ಬಂಧಿತರು. ಇನ್ಫೋಸಿಸ್ ಕಂಪನಿಯ ಪೊ್ರಸೆಸ್ ಎಕ್ಸಿಕ್ಯೂಟಿವ್ ಕವಿತಾ ಮತ್ತು ಸ್ಯಾಮಸಂಗ್ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ(ಎಚ್ಆರ್) ಕಿಶೋರ್ ಕುಮಾರ್ ಸ್ನೇಹಿತರು. ಆರೋಪಿಗಳು ಡಿ.14 ರಂದು ಮಧ್ಯಾಹ್ನ 2.15ರ ಸುಮಾರಿನಲ್ಲಿ ಚಿನ್ನಾಭರಣ ಖರೀದಿಸುವ ನೆಪದಲ್ಲಿ ಸಾರಕ್ಕಿ ಮುಖ್ಯರಸ್ತೆಯಲ್ಲಿರುವ ವಿಮಲ್ ಜ್ಯೂವೆಲರ್ಸ್ ಅಂಗಡಿಗೆ ತೆರಳಿದ್ದಾರೆ. ಈ ವೇಳೆ ಕಿಶೋರ್ ಕುಮಾರ್ ತಾನು ಪೊಲೀಸ್ ಅಧಿಕಾರಿ ಎಂದು ಕೆಲಸಗಾರರ ಬಳಿ ನಕಲಿ ಗುರುತಿನ ಚೀಟಿ(ಐಡಿ ಕಾರ್ಡ್) ತೋರಿಸಿ ಪರಿಚಯಿಸಿಕೊಂಡಿದ್ದರು.
ಇದನ್ನು ನಂಬಿದ ಅಂಗಡಿ ಕೆಲಸಗಾರರು ಇಬ್ಬರಿಗೂ ವಿವಿಧ ಮಾದರಿಯ ಚಿನ್ನಾಭರಣ ತೋರಿಸಿದ್ದಾರೆ. ಈ ನಡುವೆ ಕೆಲಸಗಾರರ ಗಮನ ಬೇರೆಡೆ ಸೆಳೆದ ಆರೋಪಿಗಳು ರು.40 ಸಾವಿರ ಮೌಲ್ಯದ 16 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು. ಈ ಸಂಬಂಧ ಜ್ಯುವೆಲರಿ ಅಂಗಡಿ ಮಾಲೀಕ ಸುರೇಶ್ಕುಮಾರ್ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳವು ಮಾಡಿದ್ದ ಚಿನ್ನದ ಸರ, ನಕಲಿ ಪೊಲೀಸ್ ಗುರುತಿನ ಚೀಟಿ, ಪೊಲೀಸ್ ಅಧಿಕಾರಿ ಸಮವಸ್ತ್ರದ ಫೋಟೋ ಗಳಿದ್ದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಭಾವಚಿತ್ರದಲ್ಲಿ ಪಿಎಸ್ಐ
ವಶಪಡಿಸಿಕೊಂಡಿರುವ ನಕಲಿ ಪೊಲೀಸ್ ಗುರುತಿನ ಚೀಟಿಯಲ್ಲಿ ಆರೋಪಿ ಕಿಶೋರ್ ಕುಮಾರ್ ಪೊಲೀಸ್ ಸಮವಸuಉದಲ್ಲಿರುವ ಭಾವಚಿತ್ರವಿದೆ. ಅಲ್ಲದೇ ಗುರುತಿನ ಚೀಟಿಯ ಹುದ್ದೆ ಜಾಗದಲ್ಲಿ ಪಿಎಸ್ಐ (ಆರ್ಮಡ್) ಐಪಿಎಸ್ ಎಂದು ತಪ್ಪು ತಪ್ಪಾಗಿ ಬರೆದುಕೊಂಡಿದ್ದಾನೆ. ಜ್ಯುವೆಲರಿ ಅಂಗಡಿಗೆ ತೆರಳಿದ ಸಂದರ್ಭದಲ್ಲಿ ಇದೇ ದೋಷಪೂರಿತ ಗುರುತಿನ ಚೀಟಿ ತೋರಿಸಿ ತಾನು ಪೊಲೀಸ್ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾನೆ. ಅಂಗಡಿ ಕೆಲಸಗಾರರು ಸೂಕ್ಷ್ಮವಾಗಿ ಗುರುತಿನ ಚೀಟಿ ಗಮನಿಸಿದ್ದರೆ ಅಂದೇ ನಕಲಿ ಪೊಲೀಸ್ ಅಧಿಕಾರಿ ಬಣ್ಣ ಬಯಲಾಗುತ್ತಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.