

ಬೆಂಗಳೂರು: ರಾಜ್ಯ ಕಬ್ಬು ಬೆಳೆಗಾರರು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನೂರಾರು ರೈತರು ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಂತಕುಮಾರ್, ಕಬ್ಬು ಬೆಳೆಗಾರರ ಬಾಕಿಯನ್ನು ಜನವರಿ 30ರ ಒಳಗಾಗಿ ಪಾವತಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಇದನ್ನು ಸಕ್ಕರೆ ಕಾರ್ಖಾನೆಗಳು ಹುಸಿಗೊಳಿಸಿವೆ.
ಆದ್ದರಿಂದ ಕಾರ್ಖಾನೆಗಳ ವರ್ತನೆ ವಿರೋಧಿಸಿ ರೈತರು ಸಾಕಷ್ಟು ಬಾರಿ ಪ್ರತಿಭಟಿಸಿದ್ದಾರೆ. ಆದರೂ ಸರ್ಕಾರ ಮಧ್ಯಪ್ರವೇಶ ಮಾಡಿ ರೈತರಿಗೆ ಬಾಕಿ ಸಿಗುವಂತೆ ಮಾಡುತ್ತಿಲ್ಲ ಎಂದು ದೂರಿದರು. ನಂತರ ಸಂಘದ ಇತರ ಮುಖಂಡರೂ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರವನ್ನು ಹಲವು ರೀತಿಯಲ್ಲಿ ಟೀಕಿಸಿದರು.
ದಿನವಿಡೀ ಪ್ರತಿಭಟಿಸಿದರೂ ಸರ್ಕಾರದಿಂದ ಯಾವುದೇ ಪ್ರತಿನಿಧಿಗಳು ಬಂದು ರೈತರು ಸಮಸ್ಯೆಗಳನ್ನು ಆಲಿಸಲಿಲ್ಲ. ಮಂಗಳವಾರ ಮುಂದುವರಿದ ಧರಣಿ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್, ಹೋರಾಟ ನಿರತ ರೈತರ ಕಬ್ಬನ್ನು ಖರೀದಿಸುವುದಿಲ್ಲ ಎಂದು ಕಾರ್ಖಾನೆಗಳು ಬೆದರಿಕೆ ಹಾಕುತ್ತಿವೆ.
ಕೆಲವು ಕಾರ್ಖಾನೆಗಳ ಮುಖಂಡರು ಭೂಗತ ದೊರೆಗಳಂತೆ ವರ್ತಿಸುತ್ತಿದ್ದಾರೆ. ಈ ಮಧ್ಯೆ ಸರ್ಕಾರದ ದ್ವಂದ್ವ ನಿಲುವು ರೈತರನ್ನು ಕಷ್ಟಕ್ಕೆ ನೂಕಿದೆ. ಆದ್ದರಿಂದ ರೈತರು ಅನಿವಾರ್ಯವಾಗಿ ಹೋರಾಟದ ಹಾದಿಯನ್ನು ತುಳಿದಿದ್ದಾರೆ. ಸರ್ಕಾರ ಈಗಲೇ ಹಳೇ ವರಸೆಯನ್ನೇ ಮುಂದುವರಿಸಿದರೆ ಕಬ್ಬು ಬೆಳೆಗಾರರು ಮುಖ್ಯಮಂತ್ರಿಗಳ ನಿವಾಸದ ಮುಂದೆ ಧರಣಿ ನಡೆಸಬೇಕಾತ್ತದೆ ಎಂದು ಎಚ್ಚರಿಸಿದರು.