

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಗಲಭೆಗೆ ಯಾರೇ ಕಾರಣರಾಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಸದ್ಯಕ್ಕೆ ಪರಿಸ್ಥಿತಿ ಹತೋಟಿಗೆ ಬಂದಿದೆ. ಗಲಭೆಗೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಡಿಐಜಿ ನಂಜುಂಡಸ್ವಾಮಿ ಸ್ಥಳದಲ್ಲಿದ್ದು ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಕೆಲವು ಕಿಡಿಗೇಡಿಗಳಿಂದ ಗಲಭೆ ಶುರುವಾಗಿದೆ. ಇದಕ್ಕೆಕಾರಣ ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಆಧರೆ, ಮೊದಲು ಕಾನೂನು ಸುವ್ಯವಸ್ಥೆಗೆ ಆದ್ಯತೆ. ಆನಂತರ ಗಲಭೆಗೆ ಕಾರಣ ಹುಡುಕುವ ಮೂಲಕ ತಪ್ಪಿತಸ್ಥರನ್ನು ಪತ್ತೆ ಹಚ್ಚಲಾಗುವುದು ಗಲಭೆಗೆ ಯಾರೇ ಕಾರಣರಾಗಿದ್ದರೂ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.