

ಬಳ್ಳಾರಿ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಲೋಕಾಯುಕ್ತ ವರದಿಯಲ್ಲಿರುವ ಅಂಶಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ನೇಮಕ ಮಾಡಿರುವ ವಿಶೇಷ ತನಿಖಾ
ದಳ (ಎಸ್‍ಐಟಿ) ಹಲವು ಇಲಾಖೆಗಳ 700 ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಅಧಿಕಾರಿಗಳ ವಿಳಾಸ ಪತ್ತೆ ಹಚ್ಚಿ, ನೋಟಿಸ್ ನೀಡಲು ಎಸ್‍ಐಟಿ ಸಿದ್ಧತೆ ನಡೆಸಿದೆ. ಎಸ್‍ಐಟಿ ಈಗಾಗಲೇ 43 ಎಫ್ ಐಆರ್ ದಾಖಲಿಸಿದ್ದು, ಅವುಗಳಲ್ಲೂ ಹಲವು ಅಧಿಕಾರಿಗಳ ಹೆಸರುಗಳು ನಮೂದಾಗಿವೆ. ಇದರ ಜತೆಗೆ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಗಣಿಗಾರಿಕೆ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಕಂದಾಯ,ಪೋಲೀಸ್, ಪ್ರಾದೇಶಿಕ ಸಾರಿಗೆ, ಪರಿಸರ ಹಾಗೂ ಕಸ್ಟಮ್ಸ್ ಇಲಾಖೆ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲು ಎಸ್‍ಐಟಿ ಮುಂದಾಗಿದೆ.
ಆರೋಪಿತ ಅಧಿಕಾರಿಗಳು ಮಾತ್ರವಲ್ಲದೆ, ಪೂರಕ ಮಾಹಿತಿಗಾಗಿ ಇತರ ಅಧಿಕಾರಿಗಳು, ಸಿಬ್ಬಂದಿ, ಗಣಿ ಮಾಲೀಕರು, ವರ್ತಕರೂ ವಿಚಾರಣೆ ಎದುರಿಸಬೇಕಾಗಿದೆ.
ಗಣಿ ಭೂಮ್ ಇದ್ದಾಗ ಕೆಲಸ ಮಾಡಿ, ನಿವೃತ್ತರಾಗಿರುವ ಅಧಿಕಾರಿಗಳಲ್ಲೂ ಈಗ ನಡುಕ ಶುರುವಾಗಿದೆ. ಸಿಬಿಐ ತನಿಖೆ ವೇಳೆ ಅರಣ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸ ಲಾಗಿತ್ತು. ಹಲವರ ಬಂಧನವೂ ಆಗಿತ್ತು. ಈಗ ಎಸ್‍ಐಟಿ ಎಷ್ಟು ಜನರನ್ನು ಸೆರೆಮನೆಗೆ ತಳ್ಳುವುದೋ ಎಂಬ ಆತಂಕ
ಅಧಿಕಾರಿಗಳಲ್ಲಿ ಶುರುವಾಗಿದೆ. ತನಿಖೆ ಭೀತಿಯಿಂದ ಬೆವರುತ್ತಿರುವ ಅಧಿಕಾರಿಗಳು, ಕಳ್ಳಹಾದಿ ಮೂಲಕ ಎಸ್ ಐಟಿ ನಡೆ ಬಗ್ಗೆ ತಿಳಿಯಲು ಯತ್ನಿಸುತ್ತಿದ್ದಾರೆ.