

ಬೆಂಗಳೂರು: ವಾಯುವಿಹಾರಿಗಳು ನಿರಾಳವಾಗಿ ಪ್ರಕೃತಿ ಸವಿಯಲು ಮನರಂಜನೆ, ಕಿವಿಗೆ ಇಂಪಾ ಗಲು ಹಕ್ಕಿಗಳ ಇಂಚರದೊಂದಿಗೆ ಸಂಗೀತ, ಆರೋಗ್ಯ ಕಾಪಾಡಿಕೊಳ್ಳಲು ಉಚಿತ ವೈದ್ಯಕೀಯ ತಪಾಸಣೆ... ಈ ಎಲ್ಲ ಅನುಕೂಲತೆಗಳೊಂದಿಗೆ ಕಬ್ಬನ್ ಉದ್ಯಾನ ಹಾಗೂ ಲಾಲ್‍ಬಾಗ್ ಸಾರ್ವಜನಿಕರಿಗೆ ವಾರದ ರಜೆಯನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ
ಮಾಡಿತು.
ಭಾನುವಾರದ ದಿನ ಲಾಲ್‍ಬಾಗ್ ಹಾಗೂ ಕಬ್ಬನ್ ಉದ್ಯಾನದಲ್ಲಿ ಸಾಕಷ್ಟು ಆಕರ್ಷಣೆಗಳಿದ್ದವು. ವಾಹನಗಳ ಕರ್ಕಶ ಶಬ್ದವಿರದ ಪ್ರಶಾಂತ ವಾತಾವರಣ ಸೃಷ್ಟಿಯಾಗಿತ್ತು. ಇದರ ಜೊತೆಗೆ ಮತ್ತಷ್ಟು ಅನುಕೂಲತೆಗಳನ್ನು ಈ ಬಾರಿ ನೀಡಲಾಯಿತು. ಒಂದೆಡೆ ಸಂಗೀತದಿಂದ ಮನ ಮುದಗೊಂಡರೆ, ಮತ್ತೊಂದೆಡೆ ಆರೋಗ್ಯ ಕಾಪಾಡಿಕೊಳ್ಳಲು ತಪಾಸಣಾ ಶಿಬಿರ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಗರದಲ್ಲಿ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿರುವ ಕಸ ವಿಲೇವಾರಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಿತು. `ಸಾಲಿಡ್ ವೇಸ್ಟ್ ಮ್ಯಾನೇಜ್‍ಮೆಂಟ್ ರೌಂಡ್ ಟೇಬಲ್'ನ ಕಾರ್ಯಕರ್ತರು ಘನತ್ಯಾಜ್ಯ ನಿರ್ವಹಣೆ, ಅಡುಗೆ ಮನೆಯ ಹಸಿಕಸದಿಂದ ಗೊಬ್ಬರ ತಯಾರಿಸುವ ವಿಧಾನ ಹಾಗೂ ಕಸದಿಂದ ಬಯೋಗ್ಯಾಸ್ ಉತ್ಪಾದಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಗಾನ ಸುಧೆ: ಬೆಳಗ್ಗೆ 6ರಿಂದ 7ರವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬ್ಯಾಂಡ್ ಸ್ಟಾಂಡ್ ಆವರಣದಲ್ಲಿ `ಉದ್ಯಾನದಲ್ಲಿ ಉದಯರಾಗ' ಭಕ್ತಿಗೀತೆ ಹಾಗೂ ಜನಪದ ಗೀತೆ ಗಾಯನ ಕಾರ್ಯಕ್ರಮ ನಡೆಯಿತು. ಗಾಯಕ ರಾಮಚಂದ್ರ ತಂಡ ಕಾರ್ಯಕ್ರಮ ನಡೆಸಿಕೊಟ್ಟಿತು. 7ರಿಂದ 8ರವ-ರೆಗೆ `ಯೂನಿವರ್ಸ್ ಆರ್ಟ್ ಫೌಂಡೇಷನ್'ನ ಸುರೇಶ್
ಕೌಶಿಕ್ ಭರತನಾಟ್ಯ ಪ್ರದರ್ಶಿಸಿದರು. ಅದು ಮುಗಿಯುತ್ತಿದ್ದಂತೆ ಕೆಎಸ್ಆರ್ ಪಿ4ನೇ ಪಡೆಯಿಂದ ಒಂದು ಗಂಟೆ ಕಾಲ ಪೊಲೀಸ್ ಬ್ಯಾಂಡ್ ವಾದನ ನಡೆಯಿತು.
ಬೆಳಗ್ಗೆ 9ರಿಂದ 10ರವರೆಗೆ `ನಾಟ್ಯೇಶ್ವರ ನೃತ್ಯ ಶಾಲೆಯ ಮಕ್ಕಳು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಸಂಜೆ 4ರಿಂದ 5ರವರೆಗೆ ಸಾಹಿತಿ ಸಿ.ಜಿ. ಲಕ್ಷ್ಮೀಪತಿ `ಕುವೆಂಪು ಅವರ
ಬದುಕು ಸಾಹಿತ್ಯ ಪರಿಚಯ' ಕಾರ್ಯಕ್ರಮ ನಡೆಸಿಕೊಟ್ಟರು. 5ರಿಂದ 6ರವರೆಗೆ ಧಾರವಾಡ ದ ಪ್ರಕಾಶ್ ಮಲ್ಲಿಗವಾಡ್ ತಂಡ ಸುಗಮ ಸಂಗೀತದಿಂದ ನೆರೆದವರ ಮನತಣಿಸಿತು.
ಪರಿಸರಸ್ನೇಹಿ ವಾಹನಗಳ ಬಗ್ಗೆ ಅರಿವು ಮೂಡಿಸಲು ನಗರ ಭೂ ಸಾರಿಗೆ ನಿರ್ದೇಶ ನಾಲಯದ ವತಿಯಿಂದ ಬಾಡಿಗೆರಹಿತ ಸೈಕಲ್ ಸವಾರಿ ಕಾರ್ಯಕ್ರಮ ನಡೆಯಿತು.
ಉದ್ಯಾನದಲ್ಲಿ ಸಾವಯವ ಉತ್ಪನ್ನಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ಜೈವಿಕ್ ಕೃಷಿ ಸೊಸೈಟಿಯ ಸಿಬ್ಬಂದಿ ಸಾವಯವ ಪದ್ಧತಿಯಲ್ಲಿ ಬೆಳೆದ ಹಣ್ಣು ಹಾಗೂ ತರಕಾರಿ ಮಾರಾಟಕ್ಕಿಟ್ಟಿದ್ದರು. ಮಾವು, ಪಪ್ಪಾಯಿ, ಏಲಕ್ಕಿ ಬಾಳೆ, ಮೂಸುಂಬಿ, ನೇರಳೆ, ಹಣ್ಣಿನ ಚಿಪ್ಸ್‍ಗಳು ಸೇರಿದಂತೆ ಸಾವಯವ ಉತ್ಪನ್ನಗಳನ್ನು ಸಾರ್ವಜನಿಕರಿಗೆ ಪರಿಚಯಿಸಲಾಯಿತು. ಪುಸ್ತಕದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸಲು ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಇಂದಿರಾ ಪ್ರಿಯದರ್ಶಿನಿ ಮಕ್ಕಳ ಗ್ರಂಥಾಲಯದ ಆವರಣದಲ್ಲಿ ಪುಸ್ತಕ ಪ್ರದರ್ಶನ ಆಯೋಜಿಸಲಾಗಿತ್ತು. ವಿವಿಧ ಸಂಘಟನೆಗಳಿಂದ ಶಾಸ್ತ್ರೀಯ ನೃತ್ಯ, ದೀಪಾಂಜಲಿ ನೃತ್ಯ, ಬೊಂಬೆ ನೃತ್ಯ, ಕಾವ್ಯ ಗಾಯನ ಕಾರ್ಯಕ್ರಮ ನಡೆಯಿತು.