

ಬೆಂಗಳೂರು: ಪತ್ರಿಕೆಯ ಮುಖಪುಟದಲ್ಲಿ ಬರ್ಬೇಕು, ಫುಲ್ ಶೈನ್ ಆಗ್ಬೇಕು ಎಂಬ ಆಸೆಯಿಂದ ವ್ಯಕ್ತಿಯೊಬ್ಬ ಬಸ್ಸನ್ನೇ ಅಪಹರಿಸಿದ ಹಾಲಿವುಡ್ ರೀತಿಯ ಸಿನಿಮೀಯ ಪ್ರಸಂಗವಿದು!
ಇಷ್ಟೇ ಅಲ್ಲ, ಬಸ್ ಕೊಡಲು ಒಪ್ಪದ ಚಾಲಕನಿಗೆ ಮಚ್ಚಿನಿಂದ ಹಲ್ಲೆ ಮಾಡಿ, ಪ್ರಯಾಣಿಕರನ್ನೂ ಇಳಿಸಿ, ತಾನೇ ಓಡಿಸಿಕೊಂಡು ಹೋಗಿ ಕಡೆಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ನಡೆದಿರುವುದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣ ಬಳಿ ಸಾತಲಗಾಂವ ಬಸ್ ನಿಲ್ದಾಣದ ಸಮೀಪ. ಬಸ್ ಹೈಜಾಕ್ ಮಾಡಿದ ವ್ಯಕ್ತಿ ಹೆಸರು ಸಾತಲಗಾಂವ ಪಿ.ಬಿ. ಗ್ರಾಮದ ಶಿವಾಜಿ ನಿಂಗಪ್ಪ ವಾಘಮೋರೆ (21). ಮನೆಯವರ ಪ್ರಕಾರ ಈತನ ಮಾನಸಿಕ ಸ್ಥಿತಿ ಸರಿಯಾಗಿಲ್ಲ.
ಪತ್ರಿಕೆಯಲ್ಲಿ ಬರಬೇಕಂತೆ: ಈತನಿಗೆ ಬಸ್ ಅಪಹರಣ ಮಾಡಬೇಕೆಂಬ ಐಡಿಯಾ ಬಂದಿದ್ದೇ ವಿಚಿತ್ರ ಅನ್ನಿಸುವ ಹಾಗಿದೆ. ಪತ್ರಿಕೆಯ ಮುಖಪುಟದಲ್ಲಿ ತನ್ನ ಭಾವಚಿತ್ರ ರಾರಾಜಿಸಬೇಕು ಎಂಬ ಹುಚ್ಚು ಆಸೆ ಜತೆ ತಾನು ಈ ಮೂಲಕ ದೊಡ್ಡ ರೌಡಿಯಾಗಬಹುದೆಂಬ ಇಂಗಿತವನ್ನು ಇಟ್ಟುಕೊಂಡು ಈ ಕೃತ್ಯ ಎಸಗಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಇಷ್ಟೆಲ್ಲ ಹೇಳುವ ಈತ ಕೊನೆಗೆ ತಮ್ಮ ಗ್ರಾಮದಲ್ಲಿನ ಮೂಲ ಸೌಲಭ್ಯ ಕೊರತೆ ಕುರಿತು ಸರ್ಕಾರದ ಗಮನ ಸೆಳೆಯುವ ಉದ್ದೇಶವೂ ಇದೆ ಎಂದಿದ್ದಾನೆ
ಹುಚ್ಚಾಟದ ಕಥೆ:
ವಿಜಯಪುರ ಜಿಲ್ಲೆಯ ಇಂಡಿ ಸಾರಿಗೆ ಡಿಪೊಗೆ ಸೇರಿದ ಇಂಡಿಲ ಮಾಣಿಹಟ್ಟಿ ಬಸ್ ಶುಕ್ರವಾರ ಬೆ.6 ಗಂಟೆಗೆ ಜಿಗಜೇವಣಿಗೆ ಗ್ರಾಮದಿಂದ 10-11 ಪ್ರಯಾಣಿಕರನ್ನು ತುಂಬಿಕೊಂಡು ಸಾತಲಗಾಂವ ಪಿ.ಬಿ. ಗ್ರಾಮದತ್ತ ಪ್ರಯಾಣಿಸಿದೆ. ಇನ್ನೇನು ಸಾತಲಗಾಂವ ಬಸ್ ನಿಲ್ದಾಣ ಸ್ವಲ್ಪವೇ ದೂರವಿದೆ ಎನ್ನುವ ಸಂದರ್ಭದಲ್ಲಿ ಈತ ರಸ್ತೆಗೆ ಅಡ್ಡವಾಗಿ ಕಲ್ಲಿಟ್ಟು ಬಸ್ ತಡೆದಿದ್ದಾನೆ.
ಚಾಲಕ ಶಿವಾಜಿ ಕಲ್ಲಪ್ಪ ಠೋಕೆಗೆ ಬಸ್‍ನಿಂದ ಕೆಳಗಿಳಿಯುವಂತೆ ಹೇಳಿದ್ದಾನೆ. ಚಾಲಕ ಒಪ್ಪದಿದ್ದಾಗ, ಆತನ ಬಲಗಾಲಿನ ಮೊಳಕಾಲಿನ ಕೆಳಗೆ ಮಚ್ಚಿನಿಂದ ಹೊಡೆದು ಗಾಯಗೊಳಿಸಿದ್ದಾನೆ. ಪ್ರಯಾಣಿಕರು, ಬಸ್ ಚಾಲಕ, ನಿರ್ವಾಹಕರನ್ನು ಬೆದರಿಸಿ ಅವರನ್ನು ಬಸ್‍ನಿಂದ ಕೆಳಕ್ಕೆ ಇಳಿಸಿ ಬಸ್ ಅಪಹರಿಸಿದ್ದಾನೆ. ಸುಮಾರು 15 ಕಿ.ಮೀ. ವರೆಗೂ ಬಸ್ ಓಡಿಸಿಕೊಂಡು ಹೋಗಿದ್ದಾನೆ. ಒಂದು ಕೈಯ್ಯಲ್ಲಿ ಸ್ಟೇರಿಂಗ್, ಮತ್ತೊಂದು ಕೈಯ್ಯಲ್ಲಿ ಮಚ್ಚು ಹಿಡಿದು, ಪಕ್ಕಾ ಸಿನಿಮೀಯ ರೀತಿಯಲ್ಲೇ ರಸ್ತೆ ತುಂಬೆಲ್ಲಾ ಅಡ್ಡಾದಿಡ್ಡಿಯಾಗಿ ಬಸ್ ಚಲಾಯಿಸಿದ್ದಾನೆ. ಬಸ್ ಅಪಹರಣದ ಸುದ್ದಿಯನ್ನು ತಕ್ಷಣ ಪೊಲೀಸರಿಗೆ ತಿಳಿಸಲಾಗಿದೆ.
ಬರಡೋಲ ಗ್ರಾಮಸ್ಥರು ಹಾಗೂ ಪೊಲೀಸರು ರಸ್ತೆಗೆ ಅಡ್ಡವಾಗಿ ಕಲ್ಲು, ಕಟ್ಟಿಗೆ ಇಟ್ಟು ಮುಂಜಾನೆ 6.45ರ ಸುಮಾರಿಗೆ ಬಸ್ ನಿಲ್ಲಿಸಿ, ವಾಘಮೋರೆಯನ್ನು ವಶಕ್ಕೆ ಪಡೆದಿದ್ದಾರೆ.
ಚಾಲಕನಾಗಿದ್ದ: ಮರಾಠಿ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ತನಕ ಓದಿರುವ ಸಾತಲಗಾಂವ ಪಿ.ಬಿ. ಗ್ರಾಮದ ವಾಘಮೋರೆ ಕೆಲವು ದಿನ ಲಾರಿ ಸೇರಿದಂತೆ ವಾಹನ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ.
ಗೊಂದಲದ ಹೇಳಿಕೆ: ಪೊಲೀಸರ ಮುಂದೆಗಳಿಗೆಗೊಂದು ಮಾಹಿತಿ ನೀಡುತ್ತಿರುವ ಈತ, ಪತ್ರಿಕೆಯ ಮುಖಪುಟದಲ್ಲಿ ತನ್ನ ಭಾವಚಿತ್ರ ಬರಬೇಕು. ನಾನೊಬ್ಬ ದೊಡ್ಡ ರೌಡಿಯಾಗಬೇಕೆಂದು ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದೇನೆ ಎಂದೂ ಹೇಳಿದ್ದಾನೆ. ಜತೆಗೆ ತನಗೆ ಎರಡು ಮದುವೆಯಾಗಿದ್ದು, ಪತ್ನಿಯರಿಬ್ಬರೂ ಮಹಾರಾಷ್ಟ್ರದ ಸತಾರಾದಲ್ಲಿದ್ದಾರೆ ಎಂದಿದ್ದಾನೆ. ಆದರೆ, ಆತನ ತಂದೆ, ತಾಯಿ ಮಾತ್ರ ಆತನ ಪ್ರಕಾರ ಮದುವೆಯಾಗಿಲ್ಲವಂತೆ. ಆತ ಮಾನಸಿಕ ಅಸ್ವಸ್ಥ ಎಂದು ಹೇಳಿದ್ದಾರೆ.