ಕಸ ಸಂಧಾನ ಕೊನೆಗೂ ಯಶಸ್ವಿ

ಬಿಬಿಎಂಪಿ ಕಸದ ಸಮಸ್ಯೆಗೆ ಎದುರಾಗಿದ್ದ ಸಮಸ್ಯೆಗೆ ಕೊನೆಗೂ ತಾತ್ಕಾಲಿಕ ಪರಿಹಾರ ಸಿಕ್ಕಿದೆ.
ಸಂಧಾನ ಯಶಸ್ವಿ, ಕಸ ಹಾಕಲು ಗುಂಡ್ಲಹಳ್ಳಿ ಗ್ರಾಮಸ್ಥರ ಒಪ್ಪಿಗೆ
ಸಂಧಾನ ಯಶಸ್ವಿ, ಕಸ ಹಾಕಲು ಗುಂಡ್ಲಹಳ್ಳಿ ಗ್ರಾಮಸ್ಥರ ಒಪ್ಪಿಗೆ
Updated on: 

ದೊಡ್ಡಬಳ್ಳಾಪುರ: ಬಿಬಿಎಂಪಿ ಕಸದ ಸಮಸ್ಯೆಗೆ ಎದುರಾಗಿದ್ದ ಸಮಸ್ಯೆಗೆ ಕೊನೆಗೂ ತಾತ್ಕಾಲಿಕ ಪರಿಹಾರ ಸಿಕ್ಕಿದೆ.

ಬುಧವಾರ ತಡರಾತ್ರಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಹುಲಿಕುಂಟೆ ಗ್ರಾಪಂ ಕಾರ್ಯಾಲಯದಲ್ಲಿ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ಗುಂಡ್ಲಹಳ್ಳಿ ಸುತ್ತಮುತ್ತಲಿನ 12 ಗ್ರಾಮಗಳ ಜನ ಷರತ್ತುಬದ್ಧವಾಗಿ ಕಸ ಸುರಿಯಲು ಒಪ್ಪಿಗೆ ನೀಡಿದ್ದಾರೆ. ಬೆಳಗ್ಗೆಯಿಂದ ಪ್ರತಿಭಟನೆ ಜೋರಾಗಿತ್ತು. ಸಂಜೆ ವೇಳೆ ಧಾವಿಸಿದ ನಾಯಕರು ಸಭೆ ನಡೆಸಿದರು. 12 ಗ್ರಾಮಗಳಲ್ಲಿ ಉಂಟಾಗಿರುವ ವಾಯುಮಾಲಿನ್ಯ ತಹಬದಿಗೆ ತರಬೇಕು, ಪ್ರತಿದಿನ 30 ಲಾರಿ ಮಾತ್ರ ಕಸ ಸುರಿಯಬೇಕು, ತಂದು ಸುರಿಯುವ ಕಸದಿಂದ ಎರೆಹುಳು ಗೊಬ್ಬರ ತಯಾರಿಕೆಗೆ ಚಾಲನೆ ನೀಡಬೇಕು, 6 ತಿಂಗಳ ನಂತರ ಕುಸ ಸುರಿಯುವ ಹಾಗಿಲ್ಲ, ಅಲ್ಲದೇ ಗುಂಡ್ಲಹಳ್ಳಿ ಸೇರಿದಂತೆ 12 ಗ್ರಾಮಗಳಿಗೆ ಟ್ಯಾಂಕರ್‍ಗಳ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕೆಂಬ ಲಿಖಿತ ಷರತ್ತಿಗೆ ಮೂವರು ನಾಯಕರು ಸಹಿ ಹಾಕಿ ಸಂಧಾನ ಯಶಸ್ವಿಗೊಳಿಸಿದರು.

ಇದಕ್ಕೂ ಮುನ್ನ ಬಿಬಿಎಂಪಿ ವ್ಯಾಪ್ತಿಯ ಕಸವನ್ನು ವಿಲೇವಾರಿ ಮಾಡುತ್ತಿರುವ ತಾಲೂಕಿನ ಟೆರ್ರಾಫಾರ್ಮ ಘಟಕಕ್ಕೆ ಯಾವುದೇ ಕಾರಣಕ್ಕೂ ಕಸ ತಂದು ಸುರಿಯಲು ಬಿಡುವುದಿಲ್ಲ ಎಂದು ಬೀದಿಗಳಿದಿರುವ ಸುತ್ತಮುತ್ತಲ 20ಕ್ಕೂ ಹೆಚ್ಚು ಗ್ರಾಮಗಳ ನಾಗರಿಕರು, ಮಹಿಳೆಯರು 2ನೇ ದಿನವೂ ತಮ್ಮ ಪಟ್ಟು ಸಡಿಲಿಸಿಲ್ಲ. ಬದಲಿಗೆ ಹೋರಾಟವನ್ನು ತೀವ್ರಗೊಳಿಸಿದ ಪರಿಣಾಮ 250ಕ್ಕೂ ಹೆಚ್ಚು ಕಸದ ಲಾರಿಗಳು ರಸ್ತೆಯಲ್ಲೇ ನಿಲ್ಲುವಂತಾಗಿದೆ. ಈ ಕುರಿತು ಯಾವುದೇ ಸಂಧಾನಕ್ಕೂ ಜಗ್ಗದ ಹೋರಾಟಗಾರರು ಸಾಮೂಹಿಕ ನಾಯಕತ್ವದಲ್ಲಿ ನಮ್ಮ ಹಳ್ಳಿಗಳನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದೇವೆ.ಕೂಡಲೇ ಕಸ ತಂದು ಸುರಿಯುವುದು ನಿಲ್ಲಬೇಕು. ನಾವು ನಮ್ಮ ಪ್ರಾಣ ಹೋದರೂ ಒಂದೇ ಒಂದು ಲಾರಿ ಕಸವನ್ನೂ ಘಟಕದ ಒಳಗೆ ಬಿಡೋದಿಲ್ಲ ಎಂದು ಪಟ್ಟು ಹಿಡಿದರು.

ಮೂಗೇನಹಳ್ಳಿ ಗೇಟ್‍ನಿಂದ ಹಿಡಿದು ದಾಬಸ್‍ಪೇಟೆಯವರೆಗೆ ಕಿಮೀ ಗಟ್ಟಲೆ ರಾಷ್ಟ್ರೀಯ ಹೆದ್ದಾರಿ 207ರಲ್ಲಿ ಕಸದ ಲಾರಿಗಳೇ ತುಂಬಿ  ಹೋಗಿದ್ದವು. ಸುಮಾರು 300 ಲಾರಿಗಳು ಕಸ ವಿಲೇವಾರಿ ಮಾಡಲಾಗದೇ ರಸ್ತೆಬದಿಯಲ್ಲೇ ನಿಂತಿದ್ದವು. ಪರಿಣಾಮವಾಗಿ ದೊಡ್ಡಬಳ್ಳಾಪುರ-ತುಮಕೂರು ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು. ಹೋರಾಟಗಾರರ ಮನವೊಲಿಕೆಗೆ ಬಂದಿದ್ದ ಶಾಸಕ ಟಿ. ವೆಂಕಟರಮಣಯ್ಯ ಅವರಿಗೆ ಮುಖಭಂಗವಾಯಿತು. ಶಾಸಕರ ಟಿ.ವೆಂಕಟರಮಣಯ್ಯ ಅವರಿಗೆ ಮುಖಭಂಗವಾಯಿತು. ಶಾಸಕರ ಮಾತುಗಳಿಗೆ ಬೆಲೆ ಕೊಡದ ಪ್ರತಿಭಟನಕಾರರು ಪೊಳ್ಳು  ಭರವಸೆಗಳು ನಮಗೆ ಬೇಕಿಲ್ಲ. ಈ ಕೂಡಲೇ ಕಸವಿಲೇವಾರಿ ಸ್ಥಗಿತವಾಗಬೇಕು ಎಂದು ಆಗ್ರಹಿಸಿದರು. ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಜನರ ಪ್ರಶ್ನೆಗಳಿಗೆ ಶಾಸಕರು ನಿರುತ್ತರರಾಗಿ ಹಿಂತಿರುಗಬೇಕಾಯಿತು.

ಪೊಲೀಸ್ ಸರ್ಪಗಾವಲು
ಪ್ರತಿಭಟನೆ ಸ್ಥಳದಲ್ಲಿ ಪೊಲೀಸರು ವ್ಯಾಪಕ ಕಟ್ಟೆಚ್ಚರ ವಹಿಸಿದ್ದರು. ರಸ್ತೆಯಲ್ಲೇ ಕುಳಿತಿದ್ದ ನೂರಾರು ಗ್ರಾಮಸ್ಥರು ಅಲ್ಲಿಂದ ಪ್ರತಿಭಟನೆ ತೆರವು ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ಟೆರ್ರಾಫಾರ್ಮ್ ಘಟಕ ಇಲ್ಲಿಂದ ಸ್ಥಳಾಂತರವಾಗುವವರೆಗೂ ಅಹೋರಾತ್ರಿ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿ ಪ್ರತಿಭಟನೆ ಸ್ಥಳದಲ್ಲೇ ಒಲೆಹಚ್ಚಿ ಅಡುಗೆ ಮಾಡಲು ಆರಂಭಿಸಿದ್ದರು.

ಪೆಂಡಾಲ್ ಹಾಗೂ ನೀರಿನ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿತ್ತು. ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಅರಿತ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಮಂತ್ರಿ ರಾಮಲಿಂಗಾರೆಡ್ಡಿ ಮತ್ತು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಮಂತ್ರಿ ಕೃಷ್ಣಬೈರೇಗೌಡ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಇವರಿಗೆ ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಬಿಬಿಎಂಪಿ ಆಡಳಿತಾಧಿಕಾರಿಗಳು ಸಾಥ್ ನೀಡಿದರು. ಹುಲಿ ಕುಂಟೆ ಗ್ರಾಪಂ ಕಾರ್ಯಾಲಯದಲ್ಲಿ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ಸಂಧಾನ ಯಶಸ್ವಿಗೊಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com