

ಬೆಂಗಳೂರು: ಉಮ್ರಾಹ್ ಡೆವೆಲಪರ್ಸ್‍ನ ಮಾಲೀಕ ಇಮ್ರಾನ್ ಖಾನ್ ಉರುಫ್ ಬಾಬು ಎಂಬುವರು ಬೆಂಗಳೂರು ದಕ್ಷಿಣ ವಿಭಾಗದ ಉಪವಿಭಾಗಾಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣದ ಆರೋಪಿ ಬಂಧನಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ನೌಕರರ ಸಂಘ ಬುಧವಾರ ಒಂದು ದಿನದ ಮುಷ್ಕರ ಹಮ್ಮಿಕೊಂಡಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಿಜಯ್ ಕುಮಾರ್, ಇಮ್ರಾನ್ ಖಾನ್(ಬಾಬು) ಎಸಿ ಕಚೇರಿಗೆ ಏಕಾಏಕಿ ನುಗ್ಗಿ, ಅನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಕಲ್ಕರೆ ಗ್ರಾಮದಲ್ಲಿ 2 ಎಕರೆ 20 ಗುಂಟೆ ಜಮೀನನ್ನು ಹರಾಜಿನಲ್ಲಿ ಖರೀದಿಸಿದ್ದೇನೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆ 109ರ ಅನ್ವಯ (ಕೃಷಿ ಭೂಮಿಯನ್ನು ಕೃಷಿಯೇತರ ಜಮೀನೆಂದು ಪರಿಗಣಿಸಿ) ಅನುಮತಿ ನೀಡಬೇಕೆಂದು ಬೆದರಿಕೆ ಹಾಕಿ ಸಾರ್ವಜನಿಕರ ಎದುರಿನಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಬಾಬು ಅವರ ಜಮೀನನ್ನು ಜೂ. 27ಕ್ಕೆ ಅ„ಕಾರಿ ಪರಿಶೀಲಿಸಬೇಕಿತ್ತು. ಆದರೆ, ಅವರು ಅದಕ್ಕೂ ಮೊದಲೇ ಅಧಿಕಾರಿ ಕಚೇರಿಗೆ ನುಗ್ಗಿ, ಸ್ಥಳ ಪರಿಶೀಲಿಸುವ ಅಗತ್ಯವಿಲ್ಲ. ಕಡತಕ್ಕೆ ಸಹಿ ಮಾಡಬೇಕೆಂದು ಧಮಕಿ ಹಾಕಿದ್ದಾರೆ.
ಈ ಕುರಿತು ಉಪ ವಿಭಾಗಾಧಿಕಾರಿ ಎನ್.ಸಿ. ನಾಗರಾಜು ಜೂ. 25ರ ಸಂಜೆ ಅಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಬಳಿಕ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಿದ್ದರು. ಆದರೆ, 6 ದಿನ ಕಳೆದರೂ ಆರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಅಧಿಕಾರಿಯ ದೂರನ್ನು ಪರಿಗಣಿಸುತ್ತಿಲ್ಲ. ಈ ಹಿಂದೆಯೂ ಬಾಬು ಹಲವು ಸಲ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ.
ಪೊಲೀಸರ ಧೋರಣೆ ಖಂಡಿಸಿ ಇಲಾಖೆ ಈಗಾಗಲೇ ನೌಕರರು 2 ದಿನ ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಿಸಿದ್ದಾರೆ. ಪೊಲೀಸರು ಶೀಘ್ರ ಕ್ರಮ ಕೈಗೊಳ್ಳಲೆಂದು ಇಲಾಖೆಯ ಸುಮಾರು 2,500 ನೌಕರರು ರಜೆ ಪಡೆದು ಕಂದಾಯ ಭವನದ ಆವ ರಣದಲ್ಲಿ ಬುಧವಾರ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಉಪಾಧ್ಯಕ್ಷ ಕೃಷ್ಣಮೂರ್ತಿ, ಎನ್. ನಂದೀಶ್ ಪ್ರಧಾನ ಕಾರ್ಯದರ್ಶಿ ಖಜಾಂಚಿ ಕೆ.ಎಂ. ಬಸವರಾಜು ಉಪಸ್ಥಿತರಿದ್ದರು.