

ಬೆಂಗಳೂರು: ಆಟವಾಡುತ್ತಿದ್ದ ಮಗುವಿನ ಮೇಲೆ ಶಾಲಾ ಬಸ್ ಹರಿದು ಮಗು ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಬೂದಿಗೆರೆ ಸಮೀಪದ ಸಿಂಗಹಳ್ಳಿಯಲ್ಲಿ ನಡೆದಿದೆ.
ಶ್ರೀನಿಧಿ(3) ಮೃತ ಬಾಲಕಿ. ಅಪಘಾತವೆಸಗಿದೆ ಚಾಲಕ ಗಂಗಾಪುರ ನಿವಾಸಿ ಕೆಂಪೇಗೌಡ (35)ನನ್ನು ಪೊಲೀಸರು ಬಂಧಿಸಿ, ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ರೈತ ಅಂಜನ್ ಕುಮಾರ್ ಹಾಗೂ ಮೈತ್ರಿ ಕುಮಾರಿ ಅವರ ಪುತ್ರಿ ಶ್ರೀನಿಧಿ. ಮೈತ್ರಿ ಅವರು ತಮ್ಮ ಹಿರಿಯ ಪುತ್ರಿ ಸೌರಭಿ(5)ಯನ್ನು ಶಾಲಾ ಬಸ್‌ಗೆ ಹತ್ತಿಸಲು ಬಂದಾಗ ಶ್ರೀನಿಧಿ ಪಕ್ಕದಲ್ಲೇ ಆಟವಾಡುತ್ತಿದ್ದಳು. ಅದನ್ನು ಚಾಲಕ ಹಾಗೂ ಆಕೆಯ ತಾಯಿ ಇಬ್ಬರೂ ಗಮನಿಸಿರಲಿಲ್ಲ. ಹಾಗಾಗಿ ವಾಹನ ಚಾಲಕನ ಬೇಜಾವಾಬ್ದಾರಿಯಿಂದ ಬಸ್ ಮಗುವಿನ ಮೇಲೆ ಹರಿದಿದೆ.
ಬೆಳಗ್ಗೆ ಸುಮಾರು 7.30ರ ವೇಳೆಗ ಘಟನೆ ಸಂಭವಿಸಿದ್ದು, ತಕ್ಷಣ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ.