ಜಿಲ್ಲಾ ಸುದ್ದಿ

ಪಿತರ ನೋವಿಗೆಂದು ಪರಿಹಾರ?

ಪಿತರ ನೋವಿಗೆಂದು ಪರಿಹಾರ?
ಅಪ್ಪ
Published On :

ಬೆಂಗಳೂರು: ಇದು ನೊಂದ ಅಪ್ಪಂದಿರ ಕಥೆ. ಗಂಡ-ಹೆಂಡತಿ ಮಧ್ಯೆ ಯಾವುದೋ ಭಿನ್ನಾಭಿಪ್ರಾಯ, ಕಲಹದಿಂದ ಬೇರ್ಪಟ್ಟು ವಿಚ್ಛೇದನ ಪಡೆದ ಮೇಲೆ ತನ್ನ ಕುಡಿಯನ್ನು ನೋಡಲೂ ಅವಕಾಶ ಸಿಗದ ಹತಾಶ ಅಪ್ಪಂದಿರ ವ್ಯಥೆ. ಪೂರ್ಣ ಎಂಬ ವ್ಯಕ್ತಿಯದ್ದೂ ಇದೇ ಗೋಳು. ಡೈವೋರ್ಸ್ ಪಡೆದಾಗಿದೆ. ತನ್ನ ಮಗುವನ್ನು ಆ ಬಳಿಕ ನೋಡಲು ಆಗಲೇ ಇಲ್ಲ. ಪತ್ನಿ ಮನೆಯ ವರಿಗೆ ಕೇಳಿದರೆ, ಮಗುವನ್ನು ಮಾತನಾಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಕೋರ್ಟ್ ಮೊರೆ ಹೋದರೂ ಇನ್ನೂ ಮಗುವಿನ ದರ್ಶನವಾಗಿಲ್ಲ. ಮಗುವಿನ ಮುಖ ನೋಡದೆ ಬರೋಬ್ಬರಿ 2-3 ವರ್ಷ ಗತಿಸಿದೆ ಎಂಬುದು ಅವರ ನೋವು. ಅಂಕಲ್ ಎಂದ ಮಗ: ಕ್ರಾಂತಿ ಎಂಬ ಮತ್ತೊಬ್ಬ ನೊಂದ ತಂದೆ ತನ್ನ ಮಗನನ್ನು ನೋಡದೆ ನಾಲ್ಕು ವರ್ಷವೇ ಗತಿಸಿದೆ. ಒಮ್ಮೆ ಕೋರ್ಟ್ ಹಾಲ್ ಬಳಿ ಮಗ ಸಿಕ್ಕಿದ ಆನಂದದಲ್ಲಿ ಮಾತನಾಡಿಸಿದರೆ, ಆ ಕಡೆ ಮಗನಿಂದ ಬಂದ ಉತ್ತರ ಇವರ ಹೃದಯವೇ ಕಿತ್ತು ಹೊರಬಂದಂತೆ ಮಾಡಿತ್ತು. ಮಗು ಕೊಟ್ಟ ಉತ್ತರ `ಹಾಯ್  ಅಂಕಲ್' ಎಂದಾಗಿತ್ತು. ಅಂದು ಇಡೀ ದಿನ ಅವರು ಬಿಕ್ಕಳಿಸಿ ಅತ್ತಿದ್ದರು. ಎರಡೇ ಸಲ: ಪತ್ನಿಯಿಂದ ಬೇರ್ಪಟ್ಟ ಮಧು ಸುಂದರ್ ಎಂಬುವರು ತಮ್ಮ 8 ವರ್ಷದ ಮಗಳಿಗೋಸ್ಕರ 2011ರಲ್ಲಿ ಕೋರ್ಟ್‍ನಲ್ಲಿ ದಾವೆ ಹೂಡುತ್ತಾರೆ. ಈ ಸಂದರ್ಭದಲ್ಲಿ ಮಾಸಿಕ ಪರಿಹಾರವಾಗಿ ರು. 7,000 ನೀಡುವಂತೆ ಆದೇಶವೂ ಹೊರಬೀಳುತ್ತದೆ. ಹೀಗಿದ್ದರೂ ಅವರಿಗೆ ನಾಲ್ಕು ವರ್ಷದಲ್ಲಿ ತಮ್ಮ ಮಗಳನ್ನು ಭೇಟಿ ಮಾಡಲು ಕೇವಲ ಎರಡೇ ಸಲ ಅವಕಾಶ ಸಿಕ್ಕಿದೆ. ಕುಟುಂಬ ನ್ಯಾಯಾಲಯದ ಮೊರೆ ಹೋಗಿದ್ದರೂ ಸಹ ಅಲ್ಲಿಂದ ಯಾವುದೇ ಆದೇಶ ಬಂದಿಲ್ಲ. ಇಂಥ ಅದೆಷ್ಟೋ ನೊಂದ ತಂದೆಯಂದಿರು ನಮ್ಮ ನಡುವೆ ಇದ್ದು, ಅವರಿಗೆ ಸೂಕ್ತ ನ್ಯಾಯ
ದೊರಕುತ್ತಿಲ್ಲ. ಅಪ್ಪಂದಿರು ಎಂದರೆ ನಮ್ಮ ನ್ಯಾಯ ವ್ಯವಸ್ಥೆಯೂ ದುಡ್ಡು ಕೊಡುವ ಯಂತ್ರ ಎಂದಷ್ಟೇ ಪರಿಗಣಿಸಿದೆಯೇ  ಹೊರತು, ಅವರಿಗೂ ಮಕ್ಕಳ ಬಗೆಗೆ ವಾತ್ಸಲ್ಯ ಇರುತ್ತದೆ ಎಂಬುದನ್ನು ಏಕೆ ಪರಿಗಣಿಸಿಲ್ಲ? ಇವರಿಗೂ ನ್ಯಾಯ ಸಿಗಬೇಕು. ಮಕ್ಕಳನ್ನು ಪೋಷಿಸುವ ಅಧಿಕಾರ ಇವರಿಗೂ ಇದೆ ಎಂದು ಅಖಿಲ ಭಾರತ ಕುಟುಂಬ ಸಂರಕ್ಷಣಾ ಪ್ರತಿಷ್ಠಾನದ ಸದಸ್ಯ ಸುಜಿತ್ ದೇಶಪಾಂಡೆ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಹೇಳಿದ್ದಾರೆ. ಪ್ರತಿಭಟನೆಗೆ ಸಿದ್ಧತೆ ನೊಂದ ಅಪ್ಪಂದಿರಿಗೆ ನ್ಯಾಯ ಕೊಡಿಸ ಬೇಕು ಎಂದು ಇಷ್ಟು ವರ್ಷ ಅನೇಕ ಬಾರಿ ಪ್ರತಿಭಟನೆಗಳನ್ನು ನಡೆಸಿದ್ದರೂ ಪ್ರಯೋ ಜ ನವಾಗಿಲ್ಲ. ಹೀಗಾಗಿ ಮಾ. 7 ಮತ್ತು 8ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಆಯೋಜಿ ಸಲಾಗಿದೆ. ಇದು ಪ್ರಾರಂಭವಾಗಿದ್ದು,ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಅಭಿಯಾನ ಆರಂಭಿಸುವುದಾಗಿ ಸುಜಿತ್ ದೇಶಪಾಂಡೆ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.