

ಬೆಂಗಳೂರು: ದ್ವಿತೀಯ ಪದವಿಪೂರ್ವ ಪರೀಕ್ಷೆ ಮಾ.12ರಿಂದ ಆರಂಭವಗಾತುತ್ದಿದು 27ರವರೆಗೆನಡೆಯಲಿದೆ. ಪ್ರಥಮ ಬಾರಿಗೆ ಪರೀಕ್ಷಾ ಕೇಂದ್ರಗಳ ಚಟುವಟಿಕೆಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಲಿವೆ.
ರಾಜ್ಯದಲ್ಲಿ 4526 ಪದವಿಪೂರ್ವ ಕಾಲೇಜು ಗಳಿದ್ದು, 1017 ಪರೀಕ್ಷಾ ಕೇಂದ್ರಗಳನ್ನು ತರೆಯಲಾಗಿದೆ. ಅದರಲ್ಲಿ 6,10,939 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ಸಲ ಪ್ರಥಮ ಬಾರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಸಲಿದ್ದು, ಎಷ್ಟು ಕೇಂದ್ರಗಳಲ್ಲಿ, ಯಾವ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಬೇಕೆಂಬ ವಿಚಾರವನ್ನು ಸರ್ಕಾರ ನಿರ್ಧರಿಸಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸುಷಮಾ ಗೋಡ ಬೋಲೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿ 3,10,665 ವಿದ್ಯಾರ್ಥಿಗಳು, 3,00,274 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುತ್ತಿದ್ದಾರೆ. 4,96,900 ಹೊಸ ವಿದ್ಯಾರ್ಥಿಗಳು, 82,067 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷೆಗಳು ಸುಗಮವಾಗಿ ನಡೆಯಲು ಎಲ್ಲ ರೀತಿಯ ಎಚ್ಚರಿಕೆಯ ಕ್ರಮ ತೆಗೆದುಕೊಳ್ಳಲಾಗಿದೆ.
ರಾಜ್ಯಾದ್ಯಂತ ಪರೀಕ್ಷೆಗಳು ಸುಲಲಿತವಾಗಿ ನಡೆಯಲು 5546 ಸಿಬ್ಬಂದಿ ನಿಯೋಜಿಸಲಾಗಿದೆ. ಇವರಲ್ಲಿ 1017 ಅಧೀಕ್ಷಕರು, 1017 ಸಹ ಮುಖ್ಯ ಅಧೀಕ್ಷಕರು, 2657 ಜಾಗೃತದಳ ಸದಸ್ಯರು, 855 ತಾಲೂಕು ಮತ್ತು ಜಿಲ್ಲಾ ವಿಶೇಷ ಜಾಗೃದಳದ ಸದಸ್ಯರು ಸೇರಿದ್ದಾರೆ.
ಇವರ ಜತೆಗೆ ಕೊಠಡಿ ಮೇಲ್ವಿಚಾರಕರನ್ನೂ ನೇಮಿಸಲಾಗುವುದು. ಆಯಾ ಜಿಲ್ಲೆಯ ತಂಡಗಳು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೆಲಸ ಮಾಡುತ್ತವೆ ಎಂದು ಅವರು ತಿಳಿಸಿದರು.
ಜಿಲ್ಲಾಮಟ್ಟದಲ್ಲಿ ವಿಶೇಷ ಜಾಗೃತದಳವನ್ನು ರಚಿಸಲಾಗುತ್ತಿದ್ದು ಜಿಲ್ಲಾ ಪೊಲೀಸ್ ವರಿಷಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಕಣ್ಗಾವಲಿನಲ್ಲಿ ಈ ತಂಡಗಳು ಕೆಲಸ ಮಾಡುತ್ತವೆ. ಈಗಾಗಲೇ ಸರ್ವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
27ರಂದು ಪರೀಕ್ಷೆಗಳು ಮುಗಿಯುತ್ತವೆ. ಎರಡು ದಿನಗಳ ನಂತರ ಮಾ.29ರಿಂದ ಮೌಲ್ಯ ಮಾಪನ ಆರಂಭವಾಗುತ್ತವೆ. ಮೌಲ್ಯಮಾಪನ ಕುರಿತಂತೆ ಯಾವುದೇ ಗೊಂದಲಗಳು ಇಲ್ಲ ಎಂದು ಸ್ಪಷ್ಟಪಡಿಸಿದ ಅವರು 15 ದಿನಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಮುಗಿಯುವಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ವಿಜ್ಞಾನ ವಿಭಾಗದಿಂದ 1,72,105, ವಾಣಿಜ್ಯವಿಭಾಗದಿಂದ 2,08,807 ಹಾಗೂ ಕಲಾ ವಿಭಾಗದಿಂದ 2,30,027 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.