ಬಿಬಿಎಂಪಿಯ ಮೊದಲ ವಾಸ್ತವ ಬಜೆಟ್ ಇಂದು

ಬಿಬಿಎಂಪಿಯ ಬಿಜೆಪಿ ಆಡಳಿತದ ಬಜೆಟ್ ಮಂಗಳವಾರ ಮಂಡನೆಯಾಗಲಿದೆ. ಯಾವುದೇ ಹೊಸ ಯೋಜನೆಗಳಿಲ್ಲದ ರು.6500 ಕೋಟಿಗೂ ಹೆಚ್ಚಿನ ಮೊತ್ತದ ಬಜೆಟ್ ಮಂಡನೆಯಾಗುವ ಸಾಧ್ಯತೆಯಿದ್ದು, ಬಿಬಿಎಂಪಿಯಲ್ಲಿ ಮಂಡನೆಯಾಗಲಿರುವ ಮೊದಲ ವಾಸ್ತವ ಬಜೆಟ್ ಇದಾಗಲಿದೆ...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ
Updated on: 

ಬೆಂಗಳೂರು: ಬಿಬಿಎಂಪಿಯ ಬಿಜೆಪಿ ಆಡಳಿತದ ಬಜೆಟ್ ಮಂಗಳವಾರ ಮಂಡನೆಯಾಗಲಿದೆ. ಯಾವುದೇ ಹೊಸ ಯೋಜನೆಗಳಿಲ್ಲದ ರು.6500 ಕೋಟಿಗೂ ಹೆಚ್ಚಿನ ಮೊತ್ತದ ಬಜೆಟ್ ಮಂಡನೆಯಾಗುವ ಸಾಧ್ಯತೆಯಿದ್ದು, ಬಿಬಿಎಂಪಿಯಲ್ಲಿ ಮಂಡನೆಯಾಗಲಿರುವ ಮೊದಲ ವಾಸ್ತವ ಬಜೆಟ್ ಇದಾಗಲಿದೆ.

ಕೌನ್ಸಿಲ್ ಸಭೆಯಲ್ಲಿ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಆನಂದ್ ಮಧ್ಯಾಹ್ನ 12 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ. ಬಿಜೆಪಿ ಆಡಳಿತ ಕಳೆದ ವರ್ಷ ಯಾವುದೇ ನಿರೀಕ್ಷಿತ ಚುನಾವಣೆ ಇಲ್ಲದಿದ್ದರೂ ಸ್ಟೀಲ್ ಸೇತುವೆ ಸೇರಿದಂತೆ ಅನೇಕ ಹೊಸ ಕಾರ್ಯಕ್ರಮಗಳಿದ್ದ ರು.7,773 ಕೋಟಿ ಮೊತ್ತದ ಬಜೆಟ್ ಮಂಡಿಸಿತ್ತು.

ಬಿಜೆಪಿ ಆಡಳಿತ ಪಾಲಿಕೆ ಚುನಾವಣೆಗೆ ಸಜ್ಜಾಗಬೇಕಿದ್ದು, ಇದಕ್ಕಾಗಿ ಮತದಾರರನ್ನು ಆಕರ್ಷಿಸುವ ಯೋಜನೆಗಳಿರುವ ಬಜೆಟ್ ಸಿದ್ಧತೆ ಮಾಡಬೇಕಿತ್ತು. ಆದರೆ ಸದಸ್ಯರೇ ಅವಧಿ ಮುಗಿದು ನಿರ್ಗಮಿಸುವವರಿದ್ದಾರೆ. ಆದ್ದರಿಂದ ಹೊಸ ಯೋಜನೆಗಳಿಲ್ಲದ ಬಜೆಟ್ ರೂಪಿಸಲಾಗಿದೆ. ಬದಲಾಗಿ ಏಪ್ರಿಲ್ ನಂತರ ನೌಕರರ ವೇತನ ಮತ್ತು ಕಚೇರಿ ನಿರ್ವಹಣೆ ಹಾಗೂ ಬಾಕಿ ಉಳಿದ ಕಾಮಗಾರಿ ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಗತ್ಯವಾದ ವಾಸ್ತವ ಬಜೆಟ್ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಬಿಎಂಪಿಯಲ್ಲಿ ಈಗಾಗಲೇ ರು.2163 ಕೋಟಿಗಳಷ್ಟು ಬಿಲ್ ಪಾವತಿಬಾಕಿ ಇದೆ. ಇದರೊಂದಿಗೆ ರು.4800 ಕೋಟಿಗಳಷ್ಟು ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಂದರೆ ಪ್ರಗತಿಯಲ್ಲಿರುವ ರು.100 ಕೋಟಿಗಳಷ್ಟು ರಾಜಕಾಲುವೆ ಕಾಮಗಾರಿ, ರು.1500 ಕೋಟಿಗಳಿಗೂ ಹೆಚ್ಚಿನ ವಾರ್ಡ್ ಕಾಮಗಾರಿಗಳು, 1000 ಕೋಟಿ ಮೊತ್ತದ ಬೃಹತ್ ಕಾಮಗಾರಿಗಳು ಹಾಗೂ ಆರೋಗ್ಯ, ಕಲ್ಯಾಣ ಇಲಾಖೆಗಳ ರು.1000 ಕೋಟಿ ಕಾರ್ಯಕ್ರಮಗಳಿಗೆ ಬಜೆಟ್‍ನಲ್ಲಿ ಅನುದಾನ ಒದಗಿಸಬೇಕಿದೆ. ಇದರೊಂದಿಗೆ ಈತನಕ ಬಿಬಿಎಂಪಿ ಮಾಡಿರುವ ಸಾಲವೇ ರು.4,800 ಕೋಟಿ ಇದೆ. ಇದಕ್ಕೆ ಕಾಲಕಾಲಕ್ಕೆ ಬಡ್ಡಿ ಪಾವತಿಸಬೇಕಿದೆ. ಇದೆಲ್ಲವನ್ನೂ ಸರಿದೂಗಿಸಿ ಬಜೆಟ್ ಸಿದ್ಧಪಡಿಸಲಾಗಿದೆ ಎಂದು ಹಣಕಾಸು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com