

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ)2011ನೇ ನೇಮಕಕ್ಕೆ ಸಂಬಂಧಿಸಿದಂತೆ ಹೊರಡಿಸಿದ್ದ ಅಧಿಸೂಚನೆ ಹಿಂಪಡೆದದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಹೈಕೋರ್ಟ್ ಸರ್ಕಾರ ಹಾಗೂ ಕೆಪಿಎಸ್ ಸಿಗೆ ನೋಟಿಸ್ ಜಾರಿ ಮಾಡಿದೆ.
ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೆಷನರಿ ಎ ಮತ್ತು ಬಿ ವಂದದ ನೇಮಕಕ್ಕೆ ಸಂಬಂಧಿಸಿದಂತೆ ಆಯ್ಕೆ ಆದ 362 ಮಂದಿಯ ಪಟ್ಟಿ ಬಿಡುಗಡೆಗೊಳಿಸಿ ನಂತರ ಸರ್ಕಾರ ಆ ಅಧಿಸೂಚನೆಯನ್ನು ಹಿಂಪಡೆದು ಆದೇಶ ಹೊರಡಿಸಿತ್ತು. ಸರ್ಕಾರ ಹಿಂಪಡೆದುಕೊಂಡ ಆದೇಶವನ್ನು ಪ್ರಶ್ನಿಸಿ ಕೆಂಪಹೊನ್ನಯ್ಯ ಸೇರಿ 147 ಮಂದಿ ಹೈಕೋರ್ಟ್ ನಲ್ಲಿ ತಕರಾರು ಅರ್ಜಿ ದಾಖಲಿಸಿದರು.
ವಿಚಾರಣೆ ನಡೆಸಿದ ನ್ಯಾ.ಬಿ.ವಿ ನಾಗರತ್ನ ಅವರಿದ್ದ ಏಕಸದಸ್ಯ ಪೀಠ ಸರ್ಕಾರ ಹಾಗೂ ಕೆಪಿಎಸ್ ಸಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ವಿವಾದವೇನು?
ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೆಷನರ್ಸ್ ಎ ಮತ್ತು ಬಿ ವೃಂದದ ನೇಮಕಕ್ಕೆ ಸರ್ಕಾರ 2011ರಲ್ಲಿ ಅಧಿಸೂಚನೆ ಹೊರಡಿಸಿತ್ತು. ನಂತರ ಪರೀಕ್ಷೆ ಬರೆದ ಸಾವಿರಾರು ಅಭ್ಯರ್ಥಿಗಳ ಪೈಕಿ 362 ಅಭ್ಯರ್ಥಿಗಳನ್ನ ಅಂತಿಮಗೊಳಿಸಲಾಯಿತು. ಈ ಮಧ್ಯೆ ನೇಮಕಕ್ಕೆ ಸಂಬಂಧಿಸಿದಂತೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದಾಗಿ ಆರೋಪ ಕೇಳಿಬಂದಿತ್ತು.
ಈ ಕಾರಣಕ್ಕಾಗಿ 2014ರ ಆ.12ರಂದು ನೇಮಕಕ್ಕೆ ಸಂಬಂಧಿಸಿದಂತೆ ಹೊರಡಿಸಿದ್ದ ಅಧಿಸೂಚನೆಯನ್ನು ಸರ್ಕಾರ ಹಿಂಪಡೆದಿತ್ತು. ಇದನ್ನು ಪ್ರಶ್ನಿಸಿ ಕೆಲವರು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ(ಕೆಎಟಿ) ಮೊರೆ ಹೋಗಿದ್ದರು. ಆದರೆ ಕೆಎಟಿಯಲ್ಲಿ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಸದ್ಯ ಕೆಎಟಿಯಲ್ಲಿ ನ್ಯಾಯಾಧೀಶರು ಹಿಂದೆ ಸರಿದ ಪರಿಣಾಮ ಅರ್ಜಿ ವಿಚಾರಣೆ ನಡೆಯದೆ ವರ್ಷಗಳಿಂದ ಹಾಗೆ ಉಳಿದಿದೆ. ಆದ ಕಾರಣ ಹೈಕೋರ್ಟ್ ಈ ಅರ್ಜಿಯನ್ನು ಮಾನ್ಯ ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.