

ಬೆಂಗಳೂರು: ಆರು ವರ್ಷದ ಬಾಲಕಿ ಮೇಲೆ ಇಬ್ಬರು ಹೈಸ್ಕೂಲ್ ವಿದಾರ್ಥಿಗಳು ಅತ್ಯಾಚಾರ ನಡೆಸಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂತ್ರಸ್ತ ಬಾಲಕಿ ಬೇಸಿಗೆ ರಜೆಗಾಗಿ ಎಚ್ ಎಸ್ಆರ್ ಲೇಔಟ್ ನಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದಳು. ಶನಿವಾರ ಮಧ್ಯಾಹ್ನ ಬಾಲಕಿ ಆಟವಾಡುತ್ತಿದ್ದ ವೇಳೆ ಬನ್ನೇರುಘಟ್ಟದ ಗ್ರಾಮದ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾರೆ.
ಬಾಲಕಿಯನ್ನು ಹುಡುಕುತ್ತಾ ಬಂದ ಆಕೆಯ ಸಹೋದರ ಕೃತ್ಯವನ್ನು ಕಣ್ಣಾರೆ ಕಂಡು, ಅಲ್ಲಿಂದ ಓಡಿಹೋಗಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾನೆ.
ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಪರಿಕ್ಷೆ ನಡೆಸಿದ್ದಾರೆ. ವೈದ್ಯರು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ದೃಢಪಡಿಸಿದ್ದಾರೆ. ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಬನ್ನೇರುಘಟ್ಟ ಪೊಲೀಸರು ಒಬ್ಬ ವಿದ್ಯಾರ್ಥಿಯನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸಿದ್ದಾರೆ.