

ಬೆಂಗಳೂರು: ದ್ವಿತಿಯ ಪಿಯುಸಿ ಫಲಿತಾಂಶ ವಿಚಾರದಲ್ಲಿ ಸರ್ಕಾರ ವಿದ್ಯಾರ್ಥಿಗಳೊಂದಿಗೆ ಆಟವಾಡಿದ್ದು, ಇದರಿಂದ ಅಮಾಯಕ ವಿದ್ಯಾರ್ಥಿಗಳನ್ನು ಸರ್ಕಾರ ಕೊಲೆ ಮಾಡಿದಂತಾಗಿದೆ ಎಂದು ಎಂದು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪಿಯುಸಿ ಫಲಿತಾಂಶ ಗೊಂದಲ ವಿರೋಧಿಸಿ ಪಿಯುಸಿ ಮಂಡಳಿ ಎದುರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಚ್.ಡಿ ಕುಮಾಸ್ವಾಮಿ, ಫಲಿತಾಂಶ ಗೊಂದಲಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲ, ಶಿಕ್ಷಣ ಸಚಿವರೂ ಕೂಡ ನೇರಹೊಣೆಯಾಗಿದ್ದಾರೆ. ಫಲಿತಾಂಶದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಾವಿಗೂ ಸರ್ಕಾರವೇ ನೇರಹೊಣೆ ಎಂದು ಆಪಾದಿಸಿದ್ದಾರೆ.
ಫಲಿತಾಂಶದಲ್ಲಿ ಉಂಟಾದ ಲೋಪದೋಷಗಳನ್ನು ಸರಿಪಡಿಸುವಂತೆ ಪಿಯು ಮಂಡಳಿ ಎದುರು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರಕ್ಕೆ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವುದಕ್ಕಿಂತ ಗ್ರಾ.ಪಂ. ಚುನಾವಣೆ, ಸರ್ವೋದಯ ಸಮಾವೇಶಗಳೇ ದೊಡ್ಡದಾಗಿದೆ.
ಅಹಿಂದಾ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯನವರು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಹಿಂದಾ ವಿದ್ಯಾರ್ಥಿಗಳೇ ಫೇಲಾಗಿದ್ದಾರೆ. ಫಲಿತಾಂಶದ ಲೋಪದೋಷದಿಂದ ಹೆಚ್ಚಾಗಿ ಇದೇ ವರ್ಗದ ವಿದ್ಯಾರ್ಥಿಗಳು ತೊಂದರೆಗೆ ಒಳಗಾಗಿದ್ದಾರೆ. ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ, ಶಿಕ್ಷಣ ಸಚಿವರು ಇದುವರೆಗೂ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.
ಸಿಇಟಿ ಫಲಿತಾಂಶವನ್ನು 15 ದಿನಗಳ ಕಾಲ ಮುಂದೂಡಬೇಕು. ಮರುಮೌಲ್ಯ ಮಾಪನಕ್ಕೆ ನಿಗದಿಪಡಿಸಿರುವ ಶುಲ್ಕವನ್ನು ಸಂಪೂರ್ಣವಾಗಿ ತೆಗೆದುಹಾಕಬೇಕೆಂದು ಒತ್ತಾಯಿಸಿ ಕುಮಾರಸ್ವಾಮಿ, ಶಿಕ್ಷಣ ಇಲಾಖೆ ಸೂಕ್ಷ್ಮವಾದಂತಹ ಇಲಾಖೆಯಾಗಿದ್ದು, ಇಲಾಖೆಗೆ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಬೇಕು. ಪ್ರಶ್ನೆಪತ್ರಿಕೆ ತಯಾರಿಕೆ, ಮೌಲ್ಯಮಾಪನ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳಿಗೆ ನಡವಳಿಯೊಂದನ್ನು ರಚಿಸಿ ಪೂರ್ವಸಿದ್ಧತೆಗಳನ್ನು ಕೈಗೊಳ್ಳಬೇಕು.
ಇಲಾಖೆಯ ಅಧಿಕಾರಿಗಳು ಉಡಾಫೆಯ ಉತ್ತರಗಳನ್ನು ನೀಡುವುದನ್ನು ನಿಲ್ಲಿಸಬೇಕು. ಲೋಪದೋಷರಹಿತ ಮೌಲ್ಯಮಾಪನವನ್ನು ನಿರ್ವಹಿಸಲು ಮಾರ್ಗಸೂಚಿಗಳನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದರು.
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಇಂದು 2 ಗಂಟೆಯೊಳಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಪರಿಹಾರ ಒದಗಿಸದಿದ್ದರೆ, ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.