

ಬೆಂಗಳೂರು: ಆಂಧ್ರ, ತೆಲಂಗಾಣ ಮತ್ತು ದೇಶದ ಉತ್ತರ ಭಾಗದಲ್ಲಿ ಬಿಸಿಲಿನ ಆರ್ಭಟ ಜೋರಾಗಿ ರಸ್ತೆಗಳೇ ಕರಗಿ ನೀರಾಗಿ ಹರಿಯುತ್ತಿದ್ದರೆ, ಇತ್ತ ಕರ್ನಾಟಕದಲ್ಲಿ ಮಳೆಯ ಅಬ್ಬರವೂ ಸದ್ದು ಮಾಡುತ್ತಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಮುಂಗಾರು ಪೂರ್ವ ಮಳೆ ಜೋರಾಗಿದೆ. ಮರ ಉರುಳಿ ಇಬ್ಬರು, ಶೆಡ್ ಕುಸಿದು ಒಬ್ಬರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಗೀಡಾಗಿದೆ. ಬಾಗೇಪಲ್ಲಿ ಪಟ್ಟಣದ ಶಾರದಾ ಬುಕ್ ಸ್ಟೋರ್ ಮಾಲೀಕ ಅಮರನಾಥರೆಡ್ಡಿ ಬುಧವಾರ ರಾತ್ರಿ ದಾಸಯ್ಯಗಾರಿಪಲ್ಲಿಯ ತಮ್ಮ ಮನೆಗೆ ತೆರಳುತ್ತಿದ್ದಾಗ ಮಳೆ ಜೋರಾಗಿದ್ದರಿಂದ ನ್ಯಾಷನಲ್ ಶೆಡ್‍ವೊಂದರ ಬಳಿಆಶ್ರಯ ಪಡೆದಿದ್ದರು. ಬಿರುಗಾಳಿ ಸಹಿತ ಜೋರು ಮಳೆಗೆ ಶೆಡ್ ಕುಸಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗುಂಡಿಬಂಡೆ ತಾಲೂಕು ಹಿರೇನಾಗೇಲಿ ಗ್ರಾಮದ ಬಳಿ ಎಸ್‍ಎನ್‍ಎಸ್ ಜಲ್ಲಿ ಕ್ರಷರ್ ನಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಪ್ಪ ಹಾಗೂ ದೊಡ್ಡಬಳ್ಳಾಪುರದ ವಡ್ಡರಹಳ್ಳಿ ಗ್ರಾಮದ ಮಂಜುನಾಥ (35) ಬಿರುಗಾಳಿ ಸಹಿತ ಮಳೆಗೆ ಮರ ಉರುಳಿ ಬಿದ್ದು ಮೃತ ಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಬೆಂಗಳೂರು ನಗರದ ಸುತ್ತಮುತ್ತ ಭಾರಿ ಮಳೆಯಾಗಿದೆ. ಬೆಳಗಾವಿ ಜಿಲ್ಲೆ ಅಥಣಿ, ಗದಗ ಜಿಲ್ಲೆ ಕುಷ್ಟಗಿಯಲ್ಲಿ ಆಲಿಕಲ್ಲು ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕೊಡಗು ಜಿಲ್ಲೆ ಕುಶಾಲ ನಗರದಲ್ಲೂ ಭಾರಿ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ಇನ್ನೂ 2 ದಿನ ಭಾರಿ ಮಳೆ
ಮುಂಗಾರು ಪೂರ್ವ ಮಳೆ ಇನ್ನೂ ಎರಡು ದಿನ ಮುಂದುವರಿಯಲಿದೆ. ವಿಶೇಷವಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಬುಧವಾರ ರಾತ್ರಿಯಿಂದ ಗುರುವಾರದವರೆಗೂ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ 6 ಸೆಮೀ ಮಳೆಯಾಗಿದೆ. ಅದೇ ರೀತಿ ಬೆಳಗಾವಿ, ಗದಗ, ಚಾಮ ರಾಜನಗರ, ಕೋಲಾರ, ರಾಮನಗರ, ತುಮಕೂರಿನಲ್ಲಿ ತಲಾ 3 ಸೆಮೀ ಮಳೆಯಾಗಿದೆ.
ಇನ್ನೂ ಎರಡು ದಿನ ಇದೇ ಸ್ಥಿತಿ ಮುಂದುವರಿಯಲಿದ್ದು, ಗುಡುಗು, ಸಿಡಿಲು ಮತ್ತು ಭಾರಿ ಮಳೆ ಆಗುವ ಸಾಧ್ಯತೆ ಇದೆ. ಮುಂಗಾರು ಆಗಮಿಸುತ್ತಿರುವ ಸಂದರ್ಭದಲ್ಲಿ ಪೂರ್ವ ಮಳೆ ಹೆಚ್ಚಾಗುತ್ತಿರುವುದಕ್ಕೆ ವಿಂಡ್‍ಶೇರ್ ಪರಿಣಾಮ ಕಾರಣವಾಗಿದ್ದು, ಇದರಿಂದ ಮಳೆ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ ಎಂದು ಹವಾಮಾನ ಇಲಾಖೆ ಪ್ರಭಾರ ನಿರ್ದೇಶಕ ಸುಂದರ್ ಎಂ. ಮೇತ್ರಿ ತಿಳಿಸಿದ್ದಾರೆ.
ಜೂನ್ 4ಕ್ಕೆ ಮುಂಗಾರು ಪ್ರವೇಶ: ಈಗಾಗಲೇ ತಿಳಿಸಿರುವ ಮುನ್ಸೂಚನೆಯಂತೆ ಮೇ 30ರ ವೇಳೆಗೆ ಮುಂಗಾರು ಕೇರಳ ಪ್ರವೇಶಿಸಲಿದೆ. ಆ ಸಮಯದಿಂದ 4 ದಿನಗಳ ನಂತರ ಕರ್ನಾಟಕಕ್ಕೆ ಆಗಮಿಸಲಿದೆ.
ಏನಿದು ವಿಂಡ್‍ಶೇರ್?
ದೇಶದ ಪೂರ್ವದಿಂದ ಪಶ್ಚಿಮ ಭಾಗದ ಕಡೆಗೆ ತೇವಾಂಶದ ಗಾಳಿ ಹೆಚ್ಚಾಗುತ್ತಿದ್ದು, ಇದರಿಂದ ಸಮುದ್ರ ಮಟ್ಟದಿಂದ 3.1 ಕಿಮೀನಿಂದ 5.8 ಕಿಮೀ ಎತ್ತರದಲ್ಲಿದೆ. ಸಮುದ್ರದ ಮೇಲ್ಮೈನಲ್ಲಿರುವ ಗಾಳಿ ಒತ್ತಡದ ಈ ಅಂತರದಲ್ಲಿ ಪೂರ್ವದಿಂದ ಉತ್ತರಕ್ಕೆ ಶೀತ ಮಾರುತ ಬೀಸುತ್ತಿದೆ. ಇದರ ಪರಿಣಾಮ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡೂ ಕಡೆಯಿಂದ ತೇವಾಂಶ ಹೆಚ್ಚುತ್ತಿದೆ. ಇದು ಕರಾವಳಿ ಮತು ದಕ್ಷಿಣ ಒಳನಾಡಿಗೆ ಹೆಚ್ಚು ಮಳೆ ಸುರಿಯುವಂತೆ ಮಾಡಲಿದೆ. ಈ ಪರಿಸ್ಥಿತಿ ಇನ್ನೂ ಕೆಲ ಕಾಲ ಇರುತ್ತದೆ. ಮುಂಗಾರು ರಾಜ್ಯಕ್ಕೆ ಆಗಮಿಸಿ ತೀವ್ರವಾಗುತ್ತಿದ್ದಂತೆ ಕಡಿಮೆಯಾಗುತ್ತದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.