ಅಪಘಾತ, ಅಪಹರಣ, ಸುಖಾಂತ್ಯ

ನಗರದಲ್ಲಿ ಹಣಕ್ಕಾಗಿ ಅಪಹರಣ ಮಾಡುವ ಪ್ರಕರಣ ಗಳು ದಿನಕ್ಕೊಂದು ವರದಿಯಾಗುತ್ತಿವೆ. ಮೊನ್ನೆಯಷ್ಟೇ ಅಕ್ಕಿ ವ್ಯಾಪಾರಿಯ ಪುತ್ರನೊಬ್ಬನನ್ನು ಅಪಹರಿಸಲಾಗಿತ್ತು. ಹೀಗಿರುವಾಗಲೇ ಮತ್ತೊಂದು ಅಪಹರಣ ಪ್ರಕರಣ ವರದಿಯಾಗಿದೆ...
ಅಪಹರಣಕ್ಕೊಳಗಾದ ಉದ್ಯಮಿ ಕುಲದೀಪ್ ಜೈನ್ (ಸಂಗ್ರಹ ಚಿತ್ರ)
ಅಪಹರಣಕ್ಕೊಳಗಾದ ಉದ್ಯಮಿ ಕುಲದೀಪ್ ಜೈನ್ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ನಗರದಲ್ಲಿ ಹಣಕ್ಕಾಗಿ ಅಪಹರಣ ಮಾಡುವ ಪ್ರಕರಣ ಗಳು ದಿನಕ್ಕೊಂದು ವರದಿಯಾಗುತ್ತಿವೆ. ಮೊನ್ನೆಯಷ್ಟೇ ಅಕ್ಕಿ ವ್ಯಾಪಾರಿಯ ಪುತ್ರನೊಬ್ಬನನ್ನು ಅಪಹರಿಸಲಾಗಿತ್ತು. ಹೀಗಿರುವಾಗಲೇ ಮತ್ತೊಂದು ಅಪಹರಣ ಪ್ರಕರಣ ವರದಿಯಾಗಿದೆ.

ನಗರದ ಕೆ.ಪಿ.ಅಗ್ರಹಾರದ ಇಟಿಎ ಗಾರ್ಡನ್ ನಿವಾಸಿ ಕುಲದೀಪ್ ಜೈನ್ (23) ಎಂಬುವರನ್ನು ಹತ್ತು ಮಂದಿಯ ಗುಂಪೊಂದು ಶನಿವಾರ ಬೆಳಗ್ಗೆ ಅಪಘಾತ ನಾಟಕವಾಡಿ ಅಪಹರಿಸಿದೆ. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಇನ್ನು 9 ಮಂದಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಬಂಧಿತನನ್ನು ಮಾಗಡಿ ರಸ್ತೆ ನಿವಾಸಿ ಸರವಣ(26) ಎಂದು ಗುರುತು ಮಾಡಲಾಗಿದೆ.

ಎಲೆಕ್ಟ್ರಿಕಲ್ ಉಪಕರಣಗಳ ಪೂರೈಕೆ ಮಾಡುವ ಉದ್ಯಮ ನೆಡೆಸುತ್ತಿದ್ದ ಕುಲದೀಪ್ ಜೈನ್, ಬಿ.ವಿ.ಕೆ ಅಯ್ಯಂಗಾರ್ ರಸ್ತೆಯಲ್ಲಿ ಕಚೇರಿ ಇಟ್ಟುಕೊಂಡಿದ್ದಾರೆ. ಕಚೇರಿಗೆ ತೆರಳೆಂದು ಹೊರಟಿದ್ದ ಕುಲದೀಪ್ ಅವರ ದ್ವಿಚಕ್ರ ವಾಹನಕ್ಕೆ ಗೂಡ್ಸ್ ಶೆಡ್ ರಸ್ತೆಯಲ್ಲಿ ಆರೋಪಿಗಳು ಹಿಂದಿನಿಂದ ಬಂದು ದ್ವಿಚಕ್ರ ವಾಹನದಿಂದ ಗುದ್ದಿದ್ದಾರೆ. ಈ ವಿಚಾರವಾಗಿ ಜಗಳ ಉಂಟಾಗಿದೆ. ಪೂರ್ವಯೋಜಿತ ಸಂಚಿನಂತೆ ಸ್ಥಳಕ್ಕೆ ಬಂದ ಮತ್ತೂ ನಾಲ್ವರು ಸಂಧಾನ ನಡೆಸುವ ನೆಪದಲ್ಲಿ, ಪೊಲೀಸ್ ಠಾಣೆಗೆ ಹೋಗೋಣವೆಂದು ಪುಸಲಾಯಿಸಿ, ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ. ಸ್ವಲ್ಪ ದೂರ ಹೋಗುತ್ತಲೇ ಮಾರಕಾಸ್ತ್ರಗಳನ್ನು ಹೊರತೆಗೆದ ದುಷ್ಕರ್ಮಿಗಳು, ಬೆದರಿಕೆಯೊಡ್ಡಿದ್ದಾರೆ.

ಮಧ್ಯಾಹ್ನದವರೆಗೂ ಮೆಜೆಸ್ಟಿಕ್ ಸುತ್ತಮುತ್ತಲ ಸುತ್ತಾಡಿಸಿದ ಆರೋಪಿಗಳು, ಕನಕಪುರ ತಾಲೂಕಿನ ಸಾತನೂರು ಅರಣ್ಯ ಪ್ರದೇಶದ, ಜಯರಾಮ್ ಎಂಬುವವರ ತೋಟದ ಮನೆಗೆ ಕುಲದೀಪ್ ರನ್ನು ಕರೆದೊಯ್ಡು ಕೂಡಿ ಹಾಕಿದ್ದರು. ಬೆಳಗ್ಗೆಯೇ ಮನೆಯಿಂದ ಹೊರಟ ಕುಲದೀಪ್, ಕಚೇರಿಗೆ ಬಂದಿರಲಿಲ್ಲ. ಮನೆಗೂ ವಾಪಸಾಗಿರಲಿಲ್ಲ. ಇದರಿಂದ ಗಾಬರಿಯಾದ ಸಹೋದರ ಸಂದೀಪ್ ಜೈನ್, ಕೆ.ಪಿ ಅಗ್ರಹಾರ ಪೊಲೀಸರಿಗೆ ದೂರು ನೀಡಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಕುಲದೀಪ್ ಮನೆಗೆ ಫೋನ್ ಕರೆ ಮಾಡಿದ್ದ ಆರೋಪಿಗಳು, ಕುಲದೀಪ್ ರನ್ನು ಅಪಹರಣ ಮಾಡಲಾಗಿದೆ. ತಾವು ಹೇಳಿದ ಜಾಗಕ್ಕೆ ರು.1 ಕೋಟಿ ತಂದು ಕೊಟ್ಟರೆ ಬಿಡುಗಡೆ ಮಾಡುತ್ತೇವೆ. ಪೊಲೀಸರಿಗೆ ಮಾಹಿತಿ ನೀಡಿದರೆ ಶವ ನೋಡಬೇಕಾಗುತ್ತದೆ ಎಂದು ಬೆದರಿಸಿದ್ದರು.

ಅರಣ್ಯ ಸಿಬ್ಬಂದಿ ಕಣ್ಣಿಗೆ ಬಿದ್ದರು
ಕುಲದೀಪ್ ರನ್ನು ಕೂಡಿಟ್ಟಿದ್ದ ಪಾಳು ಮನೆ ಅರಣ್ಯ ಪ್ರದೇಶದಲ್ಲಿದ್ದು ಅದರ ಸುತ್ತಮುತ್ತ ಬೇಲಿ ಹಾಕಲಾಗಿದೆ. ಅದಕ್ಕೆ ವಿದ್ಯುತ್ ಪೂರೈಸುವ ಬ್ಯಾಟರಿ ಶೆಟ್ ಇದೆ. ಬ್ಯಾಟರಿ ಕದಿಯುವ ಕಳ್ಳಕಾಕರ ಹಾವಳಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಭಾನುವಾರ ಮಧ್ಯಾಹ್ನವೂ ಬ್ಯಾಟರಿ ಶೆಡ್ ನೋಡಲು ಅರಣ್ಯ ಸಿಬ್ಬಂದಿ ತೆರಳಿದ್ದರು. ಅದೇ ಸಮಯದಲ್ಲಿ ಪಾಳು ಬಿದ್ದ ಮನೆಯಲ್ಲಿ ಅಪಹರಣಕಾರರು ಕಂಡಿದ್ದಾರೆ. ಈ ಬಗ್ಗೆ ವಿಚಾರಿಸಿದ ಅರಣ್ಯ ಸಿಬ್ಬಂದಿಗೆ ಅಪಹರಣಕಾರರು ಹಾರಿಕೆ ಉತ್ತರ ಕೊಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ಸಿಬ್ಬಂದಿ, ವಿಷಯವನ್ನು ಸಾತನೂರು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ದಾಳಿ ನಡೆಸಿದ ಪೊಲೀಸರಿಗೆ ಇದೊಂದು ಅಪಹರಣ ಪ್ರಕರಣ ಎಂಬುದು ಗೊತ್ತಾಗಿದೆ. ಈ ವೇಳೆ ಅಪಹೃತ ಕುಲದೀಪ್ ಅವರನ್ನು ಪೊಲೀಸರು ವಶಕ್ಕೆ ಪಡೆದು. ಒಬ್ಬ ಆರೋಪಿ ಸವರಣನ್ ನನ್ನು ಬಂಧಿಸಿದ್ದಾರೆ. ಮಿಕ್ಕವರು ಪರಾರಿಯಾಗಿದ್ದಾರೆ.

ದಾರಿ ತಪ್ಪಿಸುತ್ತಿದ್ದ ಸಂಚುಕೋರರು
ಅಪಹರಣದ ಬಗ್ಗೆ ಕುಲದೀಪ್ ಕುಟುಂಬಕ್ಕೆ ಬೆದರಿಕೆಯೊಡ್ಡುತ್ತಿದ್ದ ಆರೋಪಿಗಳು, ಬೇರೆ ಬೇರೆ ಸ್ಥಳಗಳಲ್ಲಿ ನಿಂತು ಕರೆ ಮಾಡಿದ್ದಾರೆ. ತಾವಿರುವ ಸ್ಥಳದ ಗುರುತು ಪತ್ತೆಯಾಗದಿರಲಿ ಎಂದು ಹೀಗೆ ಮಾಡಿದ್ದಾರೆ. ಅಲ್ಲದೆ, ಇದರಿಂದ ಪೊಲೀಸರಿಗೂ ಗೊಂದಲವುಂಟಾಗಿತ್ತು. ಫೋನ್ ಟವರ್ ಲೊಕೆಶನ್ ಆಧಾರದ ಮೇಲೆ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿಗಳ ಸುಳಿವು ಲಭ್ಯವಾಗುತ್ತಿರಲಿಲ್ಲ. ಆದರೆ, ಮಧ್ಯಾಹ್ನದ ವೇಳೆ ಸಾತನೂರು ಸ್ಥಳೀಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com