

ಬೆಂಗಳೂರು: ಕಬ್ಬನ್ ಪಾರ್ಕ್‍ನಲ್ಲಿ ಭಾನುವಾರ ವಾಹನ ನಿಷೇಧ ಹಿನ್ನೆಲೆಯಲ್ಲಿ ಕೆಲವು ಗಂಟೆ ಕಾಲ ದೀಪಾವಳಿ ಆಚರಣೆ ಬಗ್ಗೆಯ ಮಾಹಿತಿ ಕಾರ್ಯಾಗಾರವಾಗಿ ಮಾರ್ಪಟ್ಟಿತ್ತು. ನಟಿ ತಾರಾ ಅನುರಾಧ ಅವರು ಹಬ್ಬದಲ್ಲಿ ಅನುಸರಿಸಬೇಕಾದ ಜಾಗೃತಿ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.
ಆಚರಣೆ ಹೇಗೆ, ಪಟಾಕಿಯಿಂದ ಮಕ್ಕಳನ್ನು ಏಕೆ ದೂರವಿಡಬೇಕು, ಆದಷ್ಟು ಪರಿಸರಸ್ನೇಹಿಯಾಗಿ ಬೆಳಕಿನ ಹಬ್ಬವನ್ನು ಯಾವ ರೀತಿ ಮಾಡಬಹುದು ಎಂಬಿತ್ಯಾದಿಗಳ ಕುರಿತು ಮಾಹಿತಿಗಳನ್ನು ನೀಡಿದರು. ಕನ್ನಡ ಕ್ರಿಯಾ ಸಮಿತಿಯಿಂದ ಸಾಹಿತ್ಯ ಸೌರಭ ಎಂಬ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಸರಿ ಉತ್ತರ ಹೇಳಿದವರಿಗೆ ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಇದೇ ಸಂದರ್ಭದಲ್ಲಿ ನಡೆದ ಉದಯ ರಾಗ ಎಂಬ ಕಾರ್ಯಕ್ರಮದಲ್ಲಿ ಪ್ರವೀಣ್ ಕುಮಾರ್ ತಂಡವು ಜನಪದಗೀತೆಗಳ ಗಾಯನ ಪ್ರಸ್ತುತಪಡಿಸಿತು.
ಯೂನಿವರ್ಸ್ ಆಟ್ರ್ಸ್ ಫೌಂಡೇಷನ್ ಸಹಯೋಗದಲ್ಲಿ ಬೆಳಗ್ಗೆ 7ರಿಂದ ಪದ್ಮಾಲಯ ಡ್ಯಾನ್ಸ್ ಫೌಂಡೇಶನ್‍ನಿಂದ ಹಾಗೂ ಶಿವಪ್ರಿಯ ಸ್ಕೂಲ್ ಆಫ್ ಡ್ಯಾನ್ಸ್‍ನಿಂದ ನೃತ್ಯ ಪ್ರದರ್ಶನ ನಡೆಯಿತು. ಚಂದ್ರಿಕ ಮಹಾಪತ್ತರ್ ಹಾಗೂ ಅಂಕಿತ ಸಾಹೋ ಅವರಿಂದ ಒಡಿಸ್ಸಿ ನೃತ್ಯವೂ ಎಲ್ಲರ ಗಮನ ಸೆಳೆದವು. ಮುಂದಿನ ಭಾನುವಾರ ಮಾತ್ರವಲ್ಲದೆ ತಿಂಗಳ ಎರಡನೇ
ಶನಿವಾರವಾದ ಕಾರಣ ಅಂದು ಕೂಡ ಕಬ್ಬನ್ ಉದ್ಯಾನದಲ್ಲಿ ವಾಹನ ನಿಷೇಧವನ್ನು ಪ್ರಾಯೋಗಿಕವಾಗಿ ಮಾಡಲಾಗುತ್ತಿದೆ. ಇನ್ನು ಮುಂದೆ ತಿಂಗಳ ಎರಡನೇ ಶನಿವಾರ ಹಾಗೂ ವರ್ಷದ 3 ಸರ್ಕಾರಿ ರಜೆಗಳಲ್ಲಿ ವಾಹನ ನಿಷೇಧಿಸಲಾಗುತ್ತಿದ್ದು, ಈ ದಿನಗಳಲ್ಲಿ ಪಾರ್ಕಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗುತ್ತಿದೆ.