

ಬೆಂಗಳೂರು: ಕಂದಾಯ ಅದಾಲತ್, ಕಾನೂನು ಅದಾಲತ್, ನೀರಿನ ಅದಾಲತ್ ಮಾದರಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಹಿತದೃಷ್ಟಿಯಿಂದ ಪರೀಕ್ಷಾ ಅದಾಲತ್ ಹಮ್ಮಿಕೊಳ್ಳಲು ಮುಂದಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಂಕಪಟ್ಟಿ, ಪ್ರಮಾಣ ಪತ್ರ ಹಾಗೂ ಪರೀಕ್ಷೆಗೆ ಸಂಬಂಧಿಸಿದ ಅಹವಾಲುಗಳಿಗಾಗಿ ಪರೀಕ್ಷಾ ಅದಾಲತ್ ಹಮ್ಮಿಕೊಳ್ಳುತ್ತಿದೆ. ಅಂಕಪಟ್ಟಿ ಹಾಗೂ ಪದವಿ ಪ್ರಮಾಣ ಪತ್ರದ ವಿಳಂಬ, ನಿಗದಿತ ಸಮಯದಲ್ಲಿ ಫಲಿತಾಂಶ ಪ್ರಕಟಗೊಳ್ಳದಿರುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಒಂದೇ ವೇದಿಕೆಯಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪರೀಕ್ಷಾ ಅದಾಲತ್ ನಡೆಸಲಾಗುತ್ತಿದೆ.
ಪರೀಕ್ಷಾ ನೋಂದಣಿ ಸಂಖ್ಯೆ ತಪ್ಪಾಗಿ ನಮೂದನೆ, ಫಲಿತಾಂಶದ ವ್ಯತ್ಯಾಸ ಸೇರಿದಂತೆ ವಿದ್ಯಾರ್ಥಿಗಳು ಪರೀಕ್ಷೆ ಮತ್ತು ಫಲಿತಾಂಶಕ್ಕೆ ಸಂಬಂಧಿಸಿದ ದೂರುಗಳನ್ನು ಅದಾಲತ್‍ನಲ್ಲಿ ಸಲ್ಲಿಸ ಬಹುದು. ವಿದ್ಯಾರ್ಥಿಗಳು, ಪಾಲಕರು ಹಾಗೂ ಕಾಲೇಜು ಪ್ರಾಂಶುಪಾಲರು ಎದುರಿಸುತ್ತಿರುವ ಸಮಸ್ಯೆಗಳಿಗೆ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗವು ಪರಿಹಾರ ನೀಡಲು ಚಿಂತನೆ ನಡೆಸಿದೆ.
ಅದಾಲತ್‍ನಲ್ಲಿ ವಿವಿ ಮೌಲ್ಯಮಾಪನ ಕುಲಸಚಿವರು, ಪರೀಕ್ಷಾಂಗ ವಿಭಾಗದ ಅಧಿಕಾರಿಗಳು, ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರು, ಕಾಲೇಜಿನ ಬೋಧಕೇತರ ಸಿಬ್ಬಂದಿ, ಬೆಂವಿವಿ ಕಾನೂನು ಸಲಹಾ ವಿಭಾಗದ ಅಧಿಕಾರಿಗಳು ಪಾಲ್ಗೊಳ್ಳಬಹುದು.
ಜನವರಿಯಲ್ಲಿ ಅದಾಲತ್ ಪ್ರಾರಂಭ
ವಿದ್ಯಾರ್ಥಿಗಳು ನೇರವಾಗಿ ತಮ್ಮ ಸಮಸ್ಯೆಯನ್ನು ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲು ಅದಾಲತ್‍ನಲ್ಲಿ ಅವಕಾಶವಿದೆ. ಪರೀಕ್ಷಾಂಗ ವಿಭಾಗದಿಂದ ಅರ್ಜಿ ಪಡೆದು, ಸಮಸ್ಯೆಯನ್ನು ವಿವರಿಸಿ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ಸಹಿಯೊಂದಿಗೆ ನ.30ರೊಳಗೆ ಪರೀಕ್ಷಾಂಗ ವಿಭಾಗಕ್ಕೆ ಸಲ್ಲಿಸಬೇಕು. ಅರ್ಜಿಯನ್ನು ಪರೀಕ್ಷಾಂಗ ವಿಭಾಗದ ಅಧಿಕಾರಿಗಳು ಪರಿಶೀಲಿಸಿ ಒಂದು ತಿಂಗಳ ನಂತರ ಪರೀಕ್ಷಾ ಅದಾಲತ್ ಹಮ್ಮಿಕೊಳ್ಳುತ್ತಾರೆ. ಅದಾಲತ್‍ನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಳ್ಳಲು ಅವಕಾಶವಿದೆ. ಅದಾಲತ್ 2016ರ ಜನವರಿಯಲ್ಲಿ ಪ್ರಾರಂಭವಾಗಲಿದೆ. ನಂತರ ಪ್ರತಿ 3-4 ತಿಂಗಳಿಗೊಮ್ಮೆ ನಡೆಯಲಿದೆ ಎಂದು ವಿಶ್ವವಿದ್ಯಾಲಯ ಮೂಲಗಳು ತಿಳಿಸಿವೆ.