

ಬೆಂಗಳೂರು: ಎದುರಾಳಿ ಗುಂಪಿನ ರೌಡಿ ಮೇಲೆ ದಾಳಿ ನಡೆಸಿ ದರೋಡೆಗೆ ಹೊಂಚು ಹಾಕುತ್ತಿದ್ದ ಹರೀಶ್ ಅಲಿಯಾಸ್ ಕುಳ್ಳ ಹರೀಶ್ ನ ಮೂವರು ಸಹಚರರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಮಾರಾಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಜರಗನಹಳ್ಳಿ ಯಲ್ಲಮ್ಮ ವಠಾರ ನಿವಾಸಿ ಕಾರ್ತಿಕ್ ಅಲಿಯಾಸ್ ನಂಜಿ (20), ಮಂಡ್ಯ ಮೂಲದ ಹೆಚ್.ಕೋಡಿಹಳ್ಳಿಯ ಮಂಜುನಾಥ (24) ಹಾಗೂ ಜರಗನಹಳ್ಳಿ ಚಿಕ್ಕ ಸ್ವಾಮಿ ಲೇಔಟ್ ನ ಅಮೃತ್ (22) ಬಂಧಿತರು.
ರೌಡಿ ಹರೀಶನ ಎದುರಾಳಿ ರೌಡಿ ವಿನಯ್ ಎಂಬವನ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡುವ ಉದ್ದೇಶದಿಂದ ಜರಗನಹಳ್ಳಿ ಸಮೀಪದ ಪುಟ್ಟೇನಹಳ್ಳಿ ಕೆರೆಯ ದಂಡದ ಮದ್ದೂರಮ್ಮ ದೇವಸ್ಥಾನದ ಬಳಿ ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ, ಲಾಂಗ್, ಡ್ರ್ಯಾಗರ್ ಮತ್ತು ಖಾರದಪುಡಿ ಪೊಟ್ಟಣ ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ರೌಡಿ ಹರೀಶ್ ಮತ್ತು ಸಹಚರ ಪುನೀತ್ ಅಲಿಯಾಸ್ ಪುಂಗ ಪರಾರಿಯಾಗಿದ್ದು ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.