

ಬೆಂಗಳೂರು: ಬಹುಭಾಷಾ ನಟಿ ದಿವಂಗತ ಸೌಂದರ್ಯ ಅವರಿಗೆ `ಭವಾನಿ ಗೃಹ ನಿರ್ಮಾಣ ಸಹಕಾರ ಸಂಘ'ದಿಂದ ಮಂಜೂರಾಗಿದ್ದ ನಿವೇಶನವನ್ನು ಸಂಘದ ಮತ್ತೊಬ್ಬ ಸದಸ್ಯರಿಗೆ ಹಂಚಿಕೆ ಮಾಡಿದ್ದ ಸಹಕಾರ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಭವಾನಿ ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿವೇಶನ ಪಡೆದಿದ್ದ ಸೌಂದರ್ಯ ಅವರು ಸಿದ್ದಮ್ಮ ಎಂಬುವರಿಗೆ ಆ ನಿವೇಶನ ಮಾರಾಟ ಮಾಡುವುದಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ನೋಂದಣಿಗೂ ಮುನ್ನ ಸೌಂದರ್ಯ ಮೃತಪಟ್ಟಿದ್ದರು. ಬಳಿಕ ಸೌಂದರ್ಯ ಅವರ ಪತಿ ಆ ನಿವೇಶನವನ್ನು ಸಿದ್ದಮ್ಮಗೆ ನೋಂದಣಿ ಮಾಡಿಕೊಟ್ಟಿದ್ದರು.
ಆದರೆ, ಸಿದ್ದಮ್ಮ ಸಂಘದ ಸದಸ್ಯರಲ್ಲದ ಕಾರಣ ಸಂಘದ ಕಾರ್ಯದರ್ಶಿ ಇದೇ ನಿವೇಶನವನ್ನು ಸಂಘದ ಬೇರೊಬ್ಬ ಸದಸ್ಯರಿಗೆ ಮಂಜೂರು ಮಾಡಿದ್ದರು. ಇದನ್ನು ಪ್ರಶ್ನಿಸಿ ಸಂಘದ ಮತ್ತೊಬ್ಬ ಸದಸ್ಯ ಹಿರಿತನದ ಆಧಾರದಲ್ಲಿ ನಿವೇಶನವನ್ನು ತನಗೆ ಮಂಜೂರು ಮಾಡುವಂತೆ ಕೋರಿ ಸಹಕಾರಿ ಸಂಘಗಳ ರಿಜಿಸ್ಟ್ರಾರ್‍ಗೆ ದೂರು ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ರಿಜಿಸ್ಟ್ರಾರ್ ಹಿರಿತನದ ಆಧಾರದ ಮೇಲೆ ಅರ್ಜಿದಾರರಿಗೆ ನಿವೇಶನ ಮಂಜೂರಾ ಗಬೇಕು ಎಂದು ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಸಿದ್ದಮ್ಮ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.