

ಮೈಸೂರು: ಪತಿ ಕುಟುಂಬದವರು ವರದಕ್ಷಿಣಿ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ಪತಿಯ ಮನೆ ಎದುರು ಸೋಮವಾರ ಪ್ರತಿಭಟಿಸಿದರು.
ಶಾರದಾದೇವಿ ನಗರದಲ್ಲಿರುವ ಪತಿ ಮನೆ ಎದುರು ಪ್ರತಿಭಟಿಸಿದ ರಜನಿ, ಎರಡು ವರ್ಷದ ಹಿಂದೆ ತಮ್ಮ ಮದುವೆಯಾಗಿತ್ತು. ವರದಕ್ಷಿಣೆ ಸಹ ನೀಡಲಾಗಿತ್ತು. ಆದರೆ, ಮದುವೆಯಾದ ನಂತರ ಮತ್ತೆ ವರದಕ್ಷಿಣೆ ತರುವಂತೆ ಪತಿ ಮನೆಯವರು ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿರುವುದಾಗಿ ದೂರಿದರು. ಪತಿ ಕುಟುಂಬದವರ ವಿರುದ್ಧ ದೂರು ನೀಡಲು ರಜನಿ ಸರಸ್ವತಿಪುರಂ ಠಾಣೆಯ ಪೊಲೀಸರ ಮೂಲಕ ಮಹಿಳಾ ಠಾಣೆಗೆ ತೆರಳಿದ್ದರು.
ಆದರೆ ಮಹಿಳಾ ಠಾಣೆ ಪೊಲೀಸರು ರಜನಿ ಮತ್ತು ಪತಿ ಮನೆಯವರೊಂದಿಗೆ ಸಮಾಲೋಚನೆ ನಡೆಸಿ ಕಳುಹಿಸಿದ್ದಾರೆ. ಇದಾದ ನಂತರವೂ ತನ್ನನ್ನು ಮನೆಗೆ ಸೇರಿಸಿಕೊಂಡಿಲ್ಲ ಎಂದು ರಜನಿ ಆರೋಪಿಸಿ ತನ್ನ ತಾಯಿಯೊಂದಿಗೆ ಪತಿ ಮನೆ ಎದುರು ಪ್ರತಿಭಟಿಸಿದರು. ಈ ವಿಷಯ ತಿಳಿದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಕೆ. ರಾಧಾ ಮತ್ತು ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ರಜನಿ ಅವರಿಂದ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾ ಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.