

ಬೆಂಗಳೂರು: ಬಿಂಗಿಪುರ ಹಾಗೂ ಲಕ್ಷ್ಮೀಪುರ ಕಸ ಘಟಕಗಳು ಮುಚ್ಚಿರುವುದರಿಂದ ನಗರದಲ್ಲಿ ಮತ್ತೆ ಕಸ ವಿಲೇವಾರಿಯ ಸಮಸ್ಯೆ ಎದುರಾಗಿದೆ.
ಬಿಂಗೀಪುರದಲ್ಲಿ 800 ಟನ್ ಹಾಗೂ ಲಕ್ಷ್ಮೀಪುರದ 300 ಟನ್ ಕಸ ವಿಲೇವಾರಿಯಾಗುತ್ತಿತ್ತು. ಆದರೆ, ಸ್ಥಳೀಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಸ ವಿಲೇವಾರಿ ಸ್ಥಗಿತಗೊಳಿಸಿರುವುದರಿಂದ ಕಸ ವಿಂಗಡಣೆಯ ಹಂತದಲ್ಲಿ ಮತ್ತೆ ಕಸ ವಿಲೇವಾರಿ ಸಮಸ್ಯೆ ಎದುರಾಗಿದೆ. ಈ ಕಸವನ್ನು ಪರ್ಯಾಯವಾಗಿ ಬೇರೆ ಘಟಕಗಳಿಗೆ ಕಳುಹಿಸುತ್ತಿದ್ದರೂ ಕಸ ವಿಲೇವಾರಿ ಸಮರ್ಪಕವಾಗುತ್ತಿಲ್ಲ. ಈ ಹಿಂದೆ ಎಂಎಸ್‍ಜಿಪಿ ಹಾಗೂ ಟೆರ್ರಾ ಫಾರ್ಮ ಕಸ ಘಟಕಗಳಿಗೆ ಬೀಗ ಬಿದ್ದಾಗ ಎಲ್ಲ ಬಿಎಂಪಿ ವಲಯಗಳು ಮಾವಳ್ಳಿಪುರ ಕಸ ಘಟಕವನ್ನೇ ಅವಲಂಬಿಸಿದ್ದವು. ಪೂರ್ವ ವಲಯದಲ್ಲಿ ಸುಮಾರು 10 ಟನ್, ಪಶ್ಚಿಮದಲ್ಲಿ 650 ಟನ್ ಹಾಗೂ ಮಹದೇವಪುರ ವಲಯದಲ್ಲಿ 300 ಟನ್ ಪ್ರಮಾಣದ ಕಸ ಉತ್ಪತ್ತಿಯಾಗುತ್ತಿದೆ. ಈ ವಲಯಗಳಿಂದಲೇ ಸುಮಾರು 1,600 ಟನ್ ಪ್ರಮಾಣದ ಕಸ ಎಂಎಸ್‍ಜಿಪಿ ಹಾಗೂ ಟೆರ್ರಾ ಫಾರ್ಮ ಘಟಕಕ್ಕೆ ನಿತ್ಯ ವಿಲೇವಾರಿಯಾಗುತ್ತಿದ್ದವು. ಒಂದೇ ಕಡೆ ಕಳುಹಿಸುತ್ತಿದ್ದ ಕಸದ ವಿಲೇವಾರಿಗೆ ತಾತ್ಕಾಲಿಕ ಮಾರ್ಗಗಳನ್ನು ಕಂಡುಕೊಳ್ಳಲಾಗಿತ್ತು.
ಇದೇ ಮಾದರಿಯಲ್ಲಿ 2 ಪ್ರಮುಖ ಘಟಕಗಳು ಮುಚ್ಚಿರುವುದರಿಂದ ಪರ್ಯಾಯ ಘಟಕಗಳ ಮೊರೆ ಹೋಗಲಾಗಿದೆ. ಆದರೆ, ಕಸ ವಿಂಗಡಣೆಯ ಸಮಸ್ಯೆ ಕಂಡುಬಂದಿದ್ದು, ಯಾವುದೇ ಘಟಕಗಳಲ್ಲಿ ವಿಂಗಡಿಸದ ಕಸ ತೆಗೆದುಕೊಳ್ಳದಿರುವುದು ಸವಾಲಾಗಿ ಪರಿಣಮಿಸಿದೆ. ಇದರ ಪರಿಣಾಮವಾಗಿ ಕಸ ನಗರದಲ್ಲೇ ಉಳಿಯುತ್ತಿದೆ.
ನಡೆಯದ ವಿಂಗಡಣೆ:
ಈ ಹಿಂದೆ ಬಿಬಿಎಂಪಿ ಹಲವು ಬಾರಿ ಕಸ ವಿಂಗಡಣೆಗೆ ಆದೇಶ ನೀಡಿತ್ತು. ಸರಿಯಾಗಿ ವಿಂಗಡಿಸಿದ ಮನೆಗಳಿಗೆ ದಂಡ ವಿಧಿಸಲಾಗುವುದು ಎಂದೂ ಎಚ್ಚರಿಸಿತ್ತು. ಜೊತೆಗೆ ಬಿಬಿಎಂಪಿ ಸಿಬ್ಬಂದಿ ಕಸ ಪಡೆಯುವಾಗಲೇ ಒಂದೇ ಗಾಡಿಯಲ್ಲಿ ಒಟ್ಟಿಗೆ ಕಸ ಹಾಕುತ್ತಿದ್ದಾರೆ ಎಂಬ ದೂರು ಕೇಳಿಬಂದಿತ್ತು. ಇತ್ತೀಚೆಗೆ ಪ್ಲಾಸ್ಟಿಕ್ ನಿಷೇಧದ ಕುರಿತು ಬಿಬಿಎಎಂಪಿಯಲ್ಲಿ ಕೈಗೊಂಡ ತೀರ್ಮಾನ ಕಸ ವಿಂಡಣೆಯ ಉದ್ದೇಶವನ್ನೇ ಹೊಂದಿದೆ. ಆದರೆ, ಮೂಲದಲ್ಲಿ ಕಸ ವಿಂಗಡಿಸದ ಪರಿಣಾಮ ಕಸದ ಸಮಸ್ಯೆ ಉಂಟಾಗಿದೆ.
ಕಲಾಪದಲ್ಲೂ ನಗರ ಕಸ ಕುರಿತೇ ಆಲಾಪ
ಸತತ ಮಳೆಯಿಂದಾಗಿ ವಿಲೇವಾರಿಯಾಗದ ತ್ಯಾಜ್ಯ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಸ ವಿಲೇವಾರಿಯಾಗದ ಪರಿಣಾಮ ವಿಧಾನಸೌಧಕ್ಕೂ ಕಸದ ನಂಟು ಅಂಟುಕೊಂಡಿದೆ. ಸದನ ಕಲಾಪದಲ್ಲೂ ಕಸದ್ದೇ ಚರ್ಚೆ ತೀವ್ರತೆ ಪಡೆದುಕೊಂಡಿತ್ತು.
ಬೆಂಗಳೂರಿನಿಂದ ಆಯ್ಕೆಯಾಗಿರುವ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಉಲ್ಬಣಿಸಿರುವ ಕಸದ ಸಮಸ್ಯೆಯನ್ನು ತರಹೇವಾರಿಯಲ್ಲಿ ಮಂಡಿಸಿದರು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ರ್ಜ್ ಎಲ್ಲಾ ಶಾಸಕರ ಸಮಸ್ಯೆ ಆಲಿಸಿ, ಪರಿಹಾರವನ್ನುಕೇಳಿದರು. ಪಕ್ಷಾತೀತವಾಗಿ ಕಸದ ಸಮಸ್ಯೆ ಪರಿಹಾರಕ್ಕೆ ಕೈಜೋಡಿಸುವಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಉಭಯ ಪಕ್ಷಗಳ ಶಾಸಕರಿಗೂ ಸೂಚನೆ ನೀಡಿದರು.
ಬಿಬಿಎಂಪಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ `ಅಪವಿತ್ರ ಮೈತ್ರಿ' ಒಡೆಯುವಂತೆ ಇಟ್ಟ ಪ್ರಸ್ತಾವಕ್ಕೆ ಸ್ಪೀಕರ್ ಸಹಮತ ವ್ಯಕ್ತಪಡಿಸಿದರು. ಅಧಿವೇಶನ ಮುಗಿದ ಬಳಿಕ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಭೆ ಏರ್ಪಡಿಸುತ್ತೇನೆ. ನಗರದ 28 ಶಾಸಕರು, ಬಿಬಿಎಂಪಿಯ ಪ್ರಮುಖ ಅಧಿಕಾರಿಗಳು ಸಲಹೆ ನೀಡಿದರೆ, ಕಾರ್ಯರೂಪಕ್ಕೆ ತರುತ್ತೇನೆ.
● ಕೆಜೆ ಜಾರ್ಜ್ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರು
ಹೊಸ ಸಚಿವರಿಗೆ ತಿಪ್ಪೆ ನಗರ ಸ್ವಾಗತ ಕೋರುವಂತಾಯಿತು. ಸಿಎಂ ತಾವು ನಿರ್ವಹಿಸಬೇಕಾದ ಖಾತೆಯನ್ನು ಜಾರ್ಜ್‍ಗೆ ನೀಡಿದ್ದಾರೆ. ಸಚಿವರು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಅಪವಿತ್ರ ಮೈತ್ರಿ ಒಡೆದು ಹಾಕಬೇಕು.
ಎಸ್. ಸುರೇಶ್‍ಕುಮಾರ್ ರಾಜಾಜಿನಗರ ಕ್ಷೇತ್ರ